ಉಸಿರಾಟ, ಮಾತುಕತೆ ಮೂಲಕವೂ ಹರಡುತ್ತಾ ಕರೊನಾ? ಅಮೆರಿಕ ವಿಜ್ಞಾನಿಗಳ ವಾದವೇನು?

Corona
Published on

ಕೋವಿಡ್​-19 ಕಾಯಿಲೆಗೆ ಕಾರಣವಾಗುವ ಕರೊನಾ ವೈರಸ್​ ಸೋಂಕು ಹರಡುವ ವಿಚಾರದಲ್ಲಿ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ.

ಕರೊನಾ ವೈರಸ್​ ಗಾಳಿಯ ಮೂಲಕ ಹರಡುವ ಸಾಧ್ಯತೆಗಳಿಲ್ಲ. ಇದರ ಮೂಲಕ ಹರಡಿದ್ದರ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿತ್ತು. ಆದರೆ, ಇಬ್ಬರು ವ್ಯಕ್ತಿಗಳ ನಡುವೆ ಮಾತುಕತೆ ಹಾಗೂ ಉಸಿರಿನ ಮೂಲಕವೂ ಈ ಸೋಂಕು ವ್ಯಾಪಿಸಬಲ್ಲುದು ಎನ್ನುತ್ತಿದ್ದಾರೆ ಅಮೆರಿಕ ವಿಜ್ಞಾನಿಗಳು.

ಗಾಳಿಯ ಮೂಲಕ ಕರೊನಾ ಹರಡಬಲ್ಲುದು ಹಾಗೂ ವಾತಾವರಣದಲ್ಲಿ ಹೆಚ್ಚು ಕಾಲ ಇರುವ ಮೂಲಕ ಸುಲಭವಾಗಿ ಹರಡುತ್ತಿದೆ ಎಂದು ಅಮೆರಿಕದ ಉನ್ನತ ಮಟ್ಟದ ವೈಜ್ಞಾನಿಕ ತಂಡ ಸ್ಪಷ್ಟಪಡಿಸಿದೆ. ಈ ಮೂಲಕ ಈ ಹಿಂದಿನ ನಂಬಿಕೆಯನ್ನು ಇದು ಅಳಿಸಿಹಾಕಿದೆ ಎಂದು ಆತಂಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ಉಸಿರನ್ನು ಹೊರ ಬಿಟ್ಟಾಗ ಉಂಟಾಗುವ ಅತಿ ಸೂಕ್ಷ್ಮ ಗಾಳಿಯ ಪದರದಲ್ಲಿ ವೈರಸ್​ ಕಣಗಳು ಉಳಿದುಕೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಮೆರಿಕಕ್ಕೆ ಸಾಂಕ್ರಾಮಿಕ ರೋಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಲು ರೂಪಿಸಲಾಗಿರುವ ತ ಜ್ಞರ ಸ್ಥಾಯಿ ಸಮಿತಿ ಹಾಗೂ ನ್ಯಾಷನಲ್​ ಅಕಾಡೆಮಿ ಆಫ್​ ಸೈನ್ಸ್​, ಇಂಜಿನಿಯರಿಂಗ್​, ಮೆಡಿಸಿನ್​ ಮುಖ್ಯಸ್ಥ ಡಾ. ಹಾರ್ವೆ ಫಿನ್​ಬರ್ಗ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ಸದ್ಯಕ್ಕೆ ಸೀಮಿತ ಸಂಶೋಧನೆಯಲ್ಲಿ ಈ ವಿಚಾರ ಗೊತ್ತಾಗಿದ್ದು, ಉಸಿರಿನ ಮೂಲಕ ಸೋಂಕು ಹರಡುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ಕಾಯಿಲೆಯ ಗುಣಲಕ್ಷಣಗಳಿಲ್ಲದೆ, ಕರೊನಾ ವೈರಸ್​ ಇಷ್ಟೊಂದು ಬೃಹತ್​ ಪ್ರಮಾಣದಲ್ಲಿ ಹರಡುತ್ತಿರುವುದೇಕೆ ಎಂಬುದನ್ನು ಇದು ವಿವರಿಸುತ್ತದೆ. ಹೀಗಾಗಿ ಈ ಸೋಂಕು ವ್ಯಾಪಿಸುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸಂಪೂರ್ಣ ಲಾಕ್​ಡೌನ್​ ಘೋಷಿಸುವುದು ಅನಿವಾರ್ಯವಾಗಿದೆ ಎಂದು ವೈರಲಾಜಿಸ್ಟ್​ ಒಬ್ಬರು ಹೇಳಿದ್ದಾರೆ.

ಗಾಳಿಯ ಮೂಲಕ ಸಾಂಕ್ರಾಮಿಕವಾಗುವ ಬ್ಯಾಕ್ಟಿರಿಯಾ ಹಾಗೂ ವೈರಸ್​ಗಳು ಭಾರತದಂಥ ಹೆಚ್ಚು ಜನಸಂದಣಿ ಇರುವ ರಾಷ್ಟ್ರಗಳಿಗೆ ಭಾರಿ ಮಾರಕವಾಗಬಲ್ಲವು. ಮುಂಬೈನ ಧಾರಾವಿಯಂಥ ಕೊಳೆಗೇರಿಗಳಲ್ಲಿ, ದೆಹಲಿ ತಬ್ಲಿಘಿ ಜಮಾತ್​ಮೊದಲಾದ ಕಡೆಗಳಲ್ಲಿ ಸಾಮೂಹಿಕವಾಗಿ ವ್ಯಾಪಿಸುತ್ತಿರುವ ಲಕ್ಷಣಗಳು ಕಂಡುಬಂದಿರುವುದು ಇನ್ನೂ ಆತಂಕದ ವಿಚಾರವಾಗಿದೆ.

ಕ್ಷಯರೋಗ ಅಥವಾ ದಡಾರಕ್ಕೆ ಕಾರಣವಾಗುವ ವೈರಸ್​ನಷ್ಟು ಕರೊನಾ ಸಾಂಕ್ರಾಮಿಕವಲ್ಲದಿದ್ದರೂ ಋತುಮಾನ ಆಧರಿಸಿ ಹಬ್ಬುವ ವೈರಸ್​ಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವೆಲ್ಲೂರಿನ ಕ್ರಿಶ್ಚಿಯನ್​ ಮೆಡಿಕಲ್​ ಕಾಲೇಜಿನ ವೈರಾಲಜಿಸ್ಟ್​ ಡಾ.ಜೇಕಬ್​ ಜಾನ್​ ಹೇಳುತ್ತಾರೆ.

ಸದ್ಯ ವಿ ಜ್ಞಾನಿಗಳ ಪ್ರಕಾರ ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ದೇಹದಲ್ಲಿ ಸೇರಿಕೊಂಡಿರುವ ವೈರಸ್​ ಹೊರಬರುತ್ತದೆ. ಎರಡು ಮೀಟರ್​ ವ್ಯಾಪ್ತಿಯಲ್ಲಿರುವ ವ್ಯಕ್ತಿಗಳು ಇದರ ಸಂಪರ್ಕಕ್ಕೆ ಬರುತ್ತಾರೆ. ಇದಲ್ಲದೆ, ಈ ವೈರಸ್​ ಕಣಗಳು ಅಂಟಿಕೊಂಡಿರುವ ವಸ್ತುಗಳನ್ನು ಮುಟ್ಟುವುದರಿಂದಲೂ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಜತೆಗೆ, ಆ ವ್ಯಕ್ತಿಯಲ್ಲಿ ಉಂಟಾಗಿರುವ ಸೋಂಕಿನ ಪ್ರಮಾಣವನ್ನು ಇದು ಆಧರಿಸಿರುತ್ತದೆ ಎನ್ನುತ್ತಾರೆ. ಆದರೆ, ಅಮೆರಿಕ ವಿ ಜ್ಞಾನಿಗಳು ಈ ವಾದವನ್ನು ಅಲ್ಲಗೆಳೆದು ಉಸಿರಾಟದ ಮೂಲಕ ಸೋಂಕು ವ್ಯಾಪಿಸುವುದು ಸಾಧ್ಯ ಎಂಬ ವಾದ ಮಂಡಿಸಿದ್ದಾರೆ.

ಚೀನಾ ಪ್ರಕರಣಗಳಲ್ಲಿ ಕಂಡುಬಂದಿಲ್ಲ:

ಚೀನಾದಲ್ಲಿ 75,000ಕ್ಕೂ ಅಧಿಕ ಸೋಂಕಿತರ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು, ಗಾಳಿಯ ಮೂಲಕ ಹರಡಿದ್ದಕ್ಕೆ ಪುರಾವೆ ಇಲ್ಲ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ. ಕೆಲ ಪ್ರಕರಣಗಳಲ್ಲಿ ಅಂದರೆ, ತೀವ್ರ ಸೋಂಕಿಗೆ ಒಳಗಾಗಿರುವ ವ್ಯಕ್ತಿಗೆ ನೀಡಲಾಗಿರುವ ವೆಂಟಿಲೇಟರ್​ ವ್ಯವಸ್ಥೆಯಲ್ಲಿ ವೈರಸ್​ ಕಣಗಳು ಗಾಳಿಯ ಮೂಲಕ ಹರಡಬಹುದು ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಆದರೆ, ನೆಬ್ರಸ್ಕಾ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಕರೊನಾ ಗಾಳಿಯ ಮೂಲಕ ಹರಡಬಲ್ಲುದು ಎನ್ನುತ್ತದೆ. ಕೋವಿಡ್​ ರೋಗಿಳಿಗೆ ಚಿಕಿತ್ಸೆ ನೀಡಲಾಗುವ ಐಸೋಲೇಷನ್​ ರೂಮ್​ಗಳಲ್ಲಿ ರೋಗಿಯಿಂದ 2 ಮೀಟರ್​ ದೂರದವರೆಗೆ ಪ್ರದೇಶದಲ್ಲಿ ನಡೆಸಿದ ಅಧ್ಯಯನದಲ್ಲಿ ಕರೊನಾ ವೈರಸ್​ ಗಾಳಿಯ ಮೂಲಕ ಹರಡಬಲ್ಲುದು ಎಂಬುದು ಗೊತ್ತಾಗಿದೆ.

ಆದರೆ, ಗಾಳಿಯಲ್ಲಿ ವೈರಸ್​ನ ಆರ್​ಎನ್ಎ​ ಕಣಗಳಿವೆ ಎಂಬುದನ್ನು ಪತ್ತೆ ಹಚ್ಚುವ ಪಿಸಿಆರ್​ ( ಪಾಲಿಮರೈಸ್​ ಚೈನ್​ ರಿಯಾಕ್ಷನ್​) ಆಧರಿತ ಸಂಶೋಧನೆಗಳು ವೈಜ್ಞಾನಿಕವಲ್ಲ. ಆರ್​ಎನ್​ಎ ಕಣಗಳು ವೈರಸ್​ನ ವಾಹಕಗಳಲ್ಲ, ಇವುಗಳು ಬಹುಬೇಗ ಅವನತಿ ಹೊಂದುತ್ತವೆ ಎಂದು ಸ್ಪಷ್ಟಪಡಿಸುತ್ತಾರೆ ಡಾ.ಜೇಕಬ್​ ಜಾನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net