

ಬೆಂಗಳೂರು: ರಾಜ್ಯದ ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಕಾಣಸಿಗುವ ಬೃಹತ್ ಕೃಷ್ಣ ಸರ್ಪಕ್ಕೆ ‘ಓಫಿಯೋೆಗಸ್ ಕಾಳಿಂಗ’ ಎಂಬ ವೈಜ್ಞಾನಿಕ ಹೆಸರನ್ನು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಶುಕ್ರವಾರ ಪ್ರಕಟಿಸಿದ್ದಾರೆ.
ಕಾಳಿಂಗ ಪ್ರತಿಷ್ಠಾನದ ಡಾ.ಗೌರಿಶಂಕರ್ ಮತ್ತು ತಂಡ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಶ್ಚಿಮಘಟ್ಟ ಮತ್ತು ಮಲೆನಾಡಿನಲ್ಲಿರುವ ಅಪರೂಪದ ಅದರಲ್ಲೂ ಕಾಳಿಂಗ ಸರ್ಪಗಳ ಬಗ್ಗೆ ಡಾ.ಗೌರಿಶಂಕರ್ ಮತ್ತು ತಂಡ ಅಧ್ಯಯನ ನಡೆಸಿದೆ. ಅಲ್ಲದೆ, ಅದಕ್ಕೆ ಕನ್ನಡತನದ ವೈಜ್ಞಾನಿಕವಾದ ಹೆಸರಿಡಲು ಕಾರಣರಾಗಿದ್ದಾರೆ ಎಂದು ಪ್ರಶಂಸಿಸಿದರು.
ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಗಿ ಕಂಡು ಬರುವ ಓಫಿಯೋೇಗಸ್ ಅಂದರೆ ಕಾಳಿಂಗ ಸರ್ಪಗಳೆಲ್ಲ ಒಂದೇ ಎಂದು ಬಹುತೇಕರು ಭಾವಿಸಿದ್ದರು. ಆದರೆ ಗೌರಿಶಂಕರ್ ಮತ್ತು ತಂಡವು ಈ ಬಗ್ಗೆ ಅಧ್ಯಯನ ಮಾಡಿ, ಕರ್ನಾಟಕದ ಕಾಳಿಂಗ ಸರ್ಪಗಳು ವಿಭಿನ್ನ ಪ್ರಭೇದಕ್ಕೆ ಸೇರಿದವು ಎಂಬ ಅಂಶವನ್ನು ತಿಳಿಸಿದ್ದಾರೆ.
ಪುರಾಣ, ಪುಣ್ಯಕಥೆಗಳಲ್ಲಿ ಉಲ್ಲೇಖಿಸಲಾದ ಕಾಳಿಂಗ ಎಂದರೆ ಕಪ್ಪು ನಾಗರ ಹಾವು, ಕೃಷ್ಣಸರ್ಪ ಎಂಬ ಕಲ್ಪನೆ ನಾಡಿನ ಜನರಿಗೆ ತಿಳಿದಿದೆ. ಇದು ಅಚ್ಚಕನ್ನಡದ ಹೆಸರಾಗಿ ಜನಜನಿತವಾಗಿದ್ದು, ಇದನ್ನೇ ಅಧಿಕೃತವಾಗಿ ಕರೆಯುವುದು ಸಂತಸದ ವಿಷಯವಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಹಾವು ಕಚ್ಚಿ ಸಾಯುವವರು ಸಂಖ್ಯೆಯೂ ರಾಜ್ಯದಲ್ಲಿ ಹೆಚ್ಚುತ್ತಿದೆ. ಜನರಲ್ಲಿ ಮೂಢನಂಬಿಕೆಯಿದ್ದು, ಹಾವು ಕಚ್ಚಿದಾಗ ಮಂತ್ರವಾದಿ ಬಳಿ ಹೋಗುತ್ತಾರೆ. ವಿಷಪೂರಿತವಲ್ಲ ಹಾವು ಕಚ್ಚಿದ್ದರೆ ಬದುಕಿ ಉಳಿಯುತ್ತಾರೆ. ವಿಷಪೂರಿತ ಹಾವು ಕಚ್ಚಿದ್ದರೆ ಸಾಯುತ್ತಾರೆ ಎಂಬ ಮಾಹಿತಿ ನೀಡಿದರು.
ಹಾವು ಕಚ್ಚಿ ಸಾಯುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ಚುಚ್ಚುಮದ್ದು ಲಭ್ಯವಾಗುವಂತೆ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಮಾಲ್ಕಡೆ, ನಟ ವಿನಯ್ ರಾಜ್‌ಕುಮಾರ್, ಸಂಗೀತ ಸಂಯೋಜಕ ರಿಕಿ ಕೇಜ್ ಮತ್ತಿತರರು ಪಾಲ್ಗೊಂಡಿದ್ದರು.