28ರಿಂದ ಬೆಂಗಳೂರಲ್ಲಿ ವೈಜ್ಞಾನಿಕ ಸಮ್ಮೇಳನ

Hulikal Nataraj
Published on

ಶಿವಮೊಗ್ಗ: ವೈಜ್ಞಾನಿಕ ಸಂಶೋಧನಾ ಪರಿಷತ್, ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ, ಮಾನವ ಬಂಧುತ್ವ ವೇದಿಕೆ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಆಶ್ರಯದಲ್ಲಿ ಡಿ.28 ಮತ್ತು 29ರಂದು ಬೆಂಗಳೂರಿನ ಬಾಗಲೂರು ವಿ.ಜೆ ಇಂಟರ್‌ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ತಿಳಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಟಿ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಚಿಂತನಾ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ಪ್ರದರ್ಶನ, ಹಾಸ್ಯ ಸಂಜೆ, ವಿಜ್ಞಾನ ವಸ್ತು ಪ್ರದರ್ಶನ, ಆಹಾರ ಮೇಳ, ಕರಕುಶಲ ಮೇಳ, ವಿಜ್ಞಾನ ಮಾದರಿಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿವಿಧ ಕ್ಷೇತ್ರಗಳಲ್ಲಿ ಜೀವಮಾನ ಶ್ರೇಷ್ಠ ಸಾಧನೆಗೆ 37 ಮಂದಿಗೆ ರಾಜ್ಯಮಟ್ಟದ ಎಚ್.ಎನ್. ಪುರಸ್ಕಾರ ನೀಡಿ ಗೌರವಿಸಲಾಗುವುದು. ಮಹಿಳಾ ಸಾಧಕಿಯರನ್ನು ಗುರುತಿಸಿ ಚೈತನ್ಯಸ್ತ್ರೀ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಪರಿಷತ್ ಜಿಲ್ಲಾಧ್ಯಕ್ಷ ಬಿ.ಡಿ.ರವಿಕುಮಾರ್ ಮಾತನಾಡಿ, ಜಿಲ್ಲೆಯಿಂದ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರನ್ನು ಎಚ್.ಎನ್. ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಡಿಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಾಮಾಜಿಕ ಚಿಂತಕರು, ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಭಾಗವಹಿಸುವರು ಎಂದು ಹೇಳಿದರು.

ಪರಿಷತ್ ರಾಜ್ಯ ನಿರ್ದೇಶಕಿ ದೇವಿಕಾ ನಟರಾಜ್, ಪ್ರಮುಖರಾದ ಸೂರ್ಯಪ್ರಕಾಶ್, ಸೀಮಾ ಸೆರಾವ್, ಸಿ.ಮೂರ್ತಿ, ಜ್ಯೋತಿ ಮಣೂರು, ಎ.ಎಸ್.ನಾರಾಯಣ, ಜಯಪ್ಪ, ದೇವೇಂದ್ರಪ್ಪ, ಶಿವಮೂರ್ತಿ, ಚಂದ್ರನಾಯಕ, ಎಸ್.ಡಿ.ವಿರೂಪಾಕ್ಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net