

ಬೆಂಗಳೂರು: ರಾಜ್ಯದಲ್ಲಿ ಮಾನವ ಹಾಗೂ ವನ್ಯಪ್ರಾಣಿಗಳ ನಡುವೆ ಸಂಘಷ ಇತ್ತೀಚೆಗೆ ಹೆಚ್ಚಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿ, ವನ್ಯಪ್ರಾಣಿಗಳು ನಾಡಿಗೆ ಪ್ರವೇಶ ತಡೆಯಲು ವೈಜ್ಞಾನಿಕ ಕ್ರಮವಹಿಸಲು ಸೂಚಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಅರಣ್ಯ ಸಚಿವ ಈಶ್ವರಖಂಡ್ರೆ, ಇಲಾಖೆ ಉನ್ನತಾಧಿಕಾರಿಗಳ ಜತೆಗೆ
ಮಂಗಳವಾರ ಸಭೆ ನಡೆಸಿದ ಅವರು, ವಸ್ತುಸ್ಥಿತಿ ಮಾಹಿತಿ ಪಡೆದುಕೊಂಡರು.
ಕಳೆದ 15 ದಿನಗಳಲ್ಲಿ ಆನೆ ದಾಳಿಯಿಂದ 11 ಜನರ ಸಾವು, ನಾಗರಹೊಳೆ ಅರಣ್ಯ ಪ್ರದೇಶದ ಹೆಗ್ಗಡದೇವನಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ 10 ವರ್ಷದ ಬಾಲಕ ಕೃಷ್ಣನಾಯಕ್‌ನನ್ನು ಹುಲಿ ಎತ್ತೊಯ್ದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಸಣ್ಣ ಹಿಡುವಳಿದಾರರಿಗೆ ತೊಂದರೆ ನೀಡದೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವ ಜವಾಬ್ದಾರಿಯನ್ನು ಈಶ್ವರ್ ಖಂಡ್ರೆಗೆ ಒಪ್ಪಿಸಿದರು.
ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿರುವವರು, ಅರಣ್ಯಭೂಮಿ ಮೀಸಲು ರದ್ದಾಗಿರುವ ಪ್ರಕರಣಗಳನ್ನು ಹೊರತುಡಪಿಸಿ, ಹತ್ತಾರು ಎಕರೆ ಅರಣ್ಯ ಭೂಮಿ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ತಾಕೀತು ಮಾಡಿದರು.
ಮಳೆ ಅಭಾವದಿಂದ ಆಹಾರ ಹುಡುಕಿಕೊಂಡು ಕಾಡು ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆವಹಿಸಿ ಕ್ರಮಕೈಗೊಳ್ಳಬೇಕು ಎಂದರು.
ಆನೆಗಳು ನಾಡಿಗೆ ಲಗ್ಗೆಯಿಡುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್, ಸೌರಶಕ್ತಿ ಬೇಲಿ ಮತ್ತು ಕಂದಕ ತೋಡುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಗೆ ಪ್ರಸಕ್ತ ವರ್ಷ 100 ಕೋಟಿ ರೂ. ನೀಡಿದ್ದು, ಇದರಲ್ಲಿ ಹಳೆಯ ಬಾಕಿ ಪಾವತಿಗೆ 54 ಕೋಟಿ ರೂ. ಖರ್ಚಾಗುತ್ತಿದೆ. ಹೆಚ್ಚುವರಿ ಅನುದಾನ ನೀಡಲು ಖಂಡ್ರೆ ಮನವಿ ಮಾಡಿದರು.
ಇದಕ್ಕೆ ಸಿದ್ದರಾಮಯ್ಯ ಸ್ಪಂದಿಸಿ, ಹಳೆ ಬಾಕಿ ತೀರಿಸಲು 54 ಕೋಟಿ ರೂ. ಜತೆಗೆ ಹೆಚ್ಚುವರಿಯಾಗಿ 100 ಕೋಟಿ ರೂ. ಇದೇ ವರ್ಷ ಬಳಸಿಕೊಳ್ಳಲು ಅನುಮತಿ ನೀಡಿದರು. ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳಿಗೆ ಹಸಿರು ವಲಯ ಹೆಚ್ಚಳ ಪರಿಹಾರವಾಗಿದೆ.
ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಐದು ಕೋಟಿ ಸಸಿಗಳನ್ನು ನೆಡಲು ಮುಂದಾಗಿರುವುದಕ್ಕೆ ಪ್ರಶಂಸಿಸಿದರು. ನೆಟ್ಟ ಸಸಿಗಳು ಬೆಳೆದು, ಉಳಿಯುವುದನ್ನು ಖಚಿತಪಡಿಸಿಕೊಳ್ಳಬೇಕು. ನೈಜ ಪರಿಶೋಧನೆ ಹಾಗೂ ಜಿಯೋ ಟ್ಯಾಗ್ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ನಿರ್ದೇಶಿಸಿದರು.
ಡಿಎಫ್ ಒಗೆ ನೋಟಿಸ್
ಹಾಸನದಲ್ಲಿ ಆನೆ ತುಳಿತಕ್ಕೆ ಅರಿವಳಿಕೆ ತಜ್ಞ ವೆಂಕಟೇಶ್ ಬಲಿಯಾಗಿದ್ದಕ್ಕೆ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗಾಯಾಳು ಆನೆಗೆ ಚಿಕಿತ್ಸೆ ನೀಡುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತೆ ? ಎಂದು ಗರಂ ಆಗಿ ಕೇಳಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಹಾಸನ ಡಿಎಫ್ ಒಗೆ ಕಾರಣ ಕೇಳಿ ನೋಟಿಸ್ ಜಾರಿಗೆ ಸೂಚಿಸಿದರು.
ಐದು ತಿಂಗಳಲ್ಲಿ 28 ಜನರ ಸಾವು
ರಾಜ್ಯದಲ್ಲಿ ಕಾಡುಪ್ರಾಣಿಗಳ ದಾಳಿಯಿಂದ ಐದು ತಿಂಗಳಲ್ಲಿ (ಏ.1ರಿಂದ ಈವರೆಗೆ) 28 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಆನೆ ದಾಳಿಗೆ 22, ಕರಡಿ ಮತ್ತು ಚಿರತೆ ದಾಳಿಗೆ ತಲಾ ಇಬ್ಬರು, ಹುಲಿ ಮತ್ತು ಕಾಡು ಹಂದಿಗೆ ತಲಾ ಒಬ್ಬರು ಬಲಿಯಾಗಿದ್ದಾರೆ ಎಂದು ಸಭೆಗೆ ಈಶ್ವರ್ ಖಂಡ್ರೆ ಮಾಹಿತಿ ನೀಡಿದರು.