‘ವಿಜಯವಾಣಿ’ ಸುದ್ದಿಮನೆಯ ಕಾರ್ಯಕ್ಕೆ ಎಸ್‌ಸಿಐ, ಜೆಸಿಐ ಮೆಚ್ಚುಗೆ

sci, jci shimogga bhanavan team
ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಿದ್ದ ಎಸ್‌ಸಿಐ ಮತ್ತು ಜೆಸಿಐ ಶಿವಮೊಗ್ಗ ಭಾವನಾ ತಂಡದ ಸದಸ್ಯರು.
Published on

ಶಿವಮೊಗ್ಗ: ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಎಸ್‌ಸಿಐ(ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್) ಶಿವಮೊಗ್ಗ ಭಾವನಾ ಹಾಗೂ ಜೆಸಿಐ(ಜ್ಯೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್) ಶಿವಮೊಗ್ಗ ಭಾವನಾ ತಂಡದ ಮಹಿಳೆಯರು ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಶಿವಮೊಗ್ಗ ಕಚೇರಿಗೆ ಭೇಟಿ ನೀಡಿ, ಮುದ್ರಣಾಲಯ ಮತ್ತು ಸಂಪಾದಕೀಯ ವಿಭಾಗಗಳನ್ನು ವೀಕ್ಷಿಸಿದರು.

ಸೀನಿಯರ್, ಜ್ಯೂನಿಯರ್ ಶಿವಮೊಗ್ಗ ಭಾವನಾ ತಂಡದ 20ಕ್ಕೂ ಅಧಿಕ ಸದಸ್ಯರು ವಿಆರ್‌ಎಲ್ ಬಸ್ ಮೂಲಕ ‘ವಿಜಯವಾಣಿ’ ಕಚೇರಿಗೆ ಆಗಮಿಸಿ ಪತ್ರಿಕೆ ಸಂಪಾದಕೀಯ ವಿಭಾಗದಿಂದ ಮುದ್ರಣ ಆಗುವರೆಗಿನ ಪ್ರತಿ ಹಂತವನ್ನೂ ಕಣ್ತುಂಬಿಕೊಂಡರು. ತಂತ್ರಜ್ಞಾನ ಆಧಾರಿತ ಬೃಹತ್ ಯಂತ್ರಗಳಿಂದ ಕ್ಷಣಮಾತ್ರದಲ್ಲಿ ಸಾವಿರಾರು ಪತ್ರಿಕೆಗಳು ಮುದ್ರಣ ಆಗುವುದನ್ನು ಕಂಡು ಪುಳಕಿತರಾದರು. ಮಾನವ ಶ್ರಮ, ತಂತ್ರಜ್ಞಾನದ ಸಮ್ಮಿಶ್ರಣದಲ್ಲಿ ಓದುಗರನ್ನು ತಲುಪುವವರೆಗಿನ ಮಾಹಿತಿ ಪಡೆದರು. ಓದುಗರ ಕೈಸೇರುವುದಕ್ಕೂ ಮೊದಲು ಪತ್ರಿಕೆ ಮುದ್ರಣದ ಹಿಂದೆ ಎಷ್ಟೆಲ್ಲ ಶ್ರಮ ಅಡಗಿರುತ್ತದೆ ಎಂಬುದನ್ನು ಸ್ವತಃ ಅರಿತುಕೊಂಡರು. ಪತ್ರಿಕೆ ಬಗೆಗಿನ ಹಲವು ಆಸಕ್ತಿದಾಯಕ ವಿಚಾರಗಳನ್ನು ತಿಳಿದುಕೊಂಡರು. ಪತ್ರಿಕೆಯ ಮುದ್ರಣಾಲಯ, ಪ್ರಸರಣ ವಿಭಾಗ, ಜಾಹೀರಾತು ವಿಭಾಗ, ಸುದ್ದಿಮನೆ, ಪುಟ ವಿನ್ಯಾಸ, ಮನೆ ಮನೆ ವಿತರಣೆ ಒಳಗೊಂಡಂತೆ ನಾನಾ ವಿಷಯಗಳನ್ನು ತಿಳಿದುಕೊಂಡರು. ಸಾಮಾನ್ಯವಾಗಿ ಪತ್ರಕರ್ತರೆಂದರೆ ಬರೀ ವರದಿಗಾರರು ಮಾತ್ರ ಇರುತ್ತಾರೆ. ಕಚೇರಿಯಲ್ಲಿ ವರದಿಗಾರರು ಕೊಟ್ಟ ಸುದ್ದಿಗಳನ್ನು ಪೇಜ್‌ಗೆ ಹಾಕಿ ಮುದ್ರಣಕ್ಕೆ ಕಳುಹಿಸುತ್ತಾರೆ ಎಂಬ ಕಲ್ಪನೆ ಇತ್ತು. ಆದರೆ ಇಲ್ಲಿಗೆ ಬಂದ ಮೇಲೆ ಪತ್ರಿಕೆಗಳ ಮುದ್ರಣ ಹೇಗೆಲ್ಲ ಆಗುತ್ತದೆ ಎಂಬುದು ತಿಳಿಯಿತು. ಹಲವು ಮಾಹಿತಿ ತಿಳಿದುಕೊಂಡಿದ್ದು ತುಂಬ ಖುಷಿಯಾಯಿತು ಎಂದು ಶಿವಮೊಗ್ಗ ಭಾವನಾ ತಂಡಗಳ ಸದಸ್ಯರು ಅಭಿಪ್ರಾಯ ಹಂಚಿಕೊಂಡರು. ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿ ಅವರು ಮುದ್ರಣ ಮತ್ತು ಸಂಪಾದಕೀಯ ವಿಭಾಗದ ಕಾರ್ಯವೈಖರಿ ಕುರಿತು ವಿವರಿಸಿದರು. ಸುದ್ದಿಗಳ ಮೂಲ, ಸಂಗ್ರಹ, ನೈಜತೆ ಪರಿಶೀಲನೆ, ಪುಟ ವಿನ್ಯಾಸ, ಪೇಜ್‌ಗಳನ್ನು ಸಿಟಿಪಿಗೆ ಕಳುಹಿಸುವುದು, ಅಲ್ಲಿಂದ ಮುದ್ರಣಾಲಯಕ್ಕೆ ರವಾನಿಸುವ ವಿಧಾನವನ್ನು ತಿಳಿದುಕೊಂಡರು.

ಸಾಮಾಜಿಕ ಕ್ಷೇತ್ರದಲ್ಲಿ ಇರುವುದರಿಂದ ಪತ್ರಿಕೆಗಳ ವರದಿಗಾರರು, ಛಾಯಾಗ್ರಾಹಕರನ್ನು ನಿತ್ಯವೂ ನೋಡುತ್ತಿದ್ದೆವು. ಆದರೆ ಒಂದು ಪತ್ರಿಕೆ ಹೊರಬರಲು ಎಷ್ಟೆಲ್ಲ ಶ್ರಮ ಇರುತ್ತದೆ ಎಂಬ ಕಲ್ಪನೆ ಇರಲಿಲ್ಲ. ಅದನ್ನು ತಿಳಿಯುವಂತೆ ಮಾಡಿದ ವಿಜಯವಾಣಿ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ. -ರೇಖಾ ರಂಗನಾಥ, ಜೆಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ ಮನೆಗಳಿಗೆ ಪೇಪರ್ ಬರುವಾಗ ರೆಡಿಮೇಡ್ ಫುಡ್ ಇರುತ್ತಿತ್ತು. ಸ್ವಲ್ಪ ಸಮಯ ಓದಿ ಆನಂತರ ಪತ್ರಿಕೆಗಳನ್ನು ಪಕ್ಕಕ್ಕಿಡುತ್ತಿದ್ದೆವು. ಆದರೆ ಪತ್ರಿಕೆಗಳ ಮುದ್ರಣದ ಹಿಂದೆ ಎಷ್ಟೆಲ್ಲ ಕೆಲಸ ಇರುತ್ತದೆ ಎಂಬುದು ಗೊತ್ತಿರಲಿಲ್ಲ. ಗುಣಮಟ್ಟದಲ್ಲೂ ನಂಬರ್ ಒನ್ ಆಗಿರುವ ‘ವಿಜಯವಾಣಿ’ ಉತ್ಕೃಷ್ಟವಾಗಿಯೇ ಓದುಗರಿಗೆ ತಲುಪುತ್ತಿದೆ. -ಸುರೇಖಾ ಮುರಳೀಧರ್, ಎಸ್‌ಸಿಐ ಶಿವಮೊಗ್ಗ ಭಾವನಾ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net