ಮುನ್ನೆಚ್ಚರಿಕೆ ಇರಲಿ; ಶೈಕ್ಷಣಿಕ ರಂಗ ಮರಳಿ ಹಳಿಗೆ...

Editorial
Published on

ಕರೊನಾ ಸೃಷ್ಟಿಸಿದ ಆತಂಕ ಕರಗುತ್ತಿದ್ದು, ಕೊನೆಗೂ ಶೈಕ್ಷಣಿಕ ವಲಯ ಸಹಜ ಸ್ಥಿತಿಗೆ ಮರಳುತ್ತಿರುವುದು ಸಮಾಧಾನಕರ ಸಂಗತಿ. ರಾಜ್ಯದಲ್ಲಿ ಫೆಬ್ರವರಿ 1ರಿಂದ ಶಾಲೆಗಳು ತೆರೆಯುವ ಪ್ರಕ್ರಿಯೆ ಹಂತ ಹಂತವಾಗಿ ಆರಂಭವಾಗಿದ್ದು, 9 ರಿಂದ 12ನೇ ತರಗತಿಗಳಿಗೆ ಪಾಠ ನಡೆಯುತ್ತಿದೆ. ಫೆಬ್ರವರಿ 22ರಿಂದ 6 ರಿಂದ 8ನೇ ತರಗತಿಗಳು ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ವಿದ್ಯಾಗಮ ಕಾರ್ಯಕ್ರಮವನ್ನೇ ನೆಚ್ಚಿಕೊಂಡಿದ್ದ 6-8ನೇ ತರಗತಿಗಳಿಗೆ ಪಾಠ ಶುರುವಾಗುತ್ತಿರುವುದು, ಮಕ್ಕಳಲ್ಲೂ ಉತ್ಸಾಹ ಹೆಚ್ಚಿಸಿದೆ. ಜನವರಿ 1ರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿಗಳು ದಿನಬಿಟ್ಟು ದಿನ ಆರಂಭಿಸಿದ ಬಳಿಕ ಹಾಜರಾತಿ ಪ್ರಮಾಣ ಹೆಚ್ಚುತ್ತಿದೆ. 1ರಿಂದ 5ನೇ ತರಗತಿ ಆರಂಭದ ಬಗ್ಗೆ ಈ ತಿಂಗಳ 23-24ಕ್ಕೆ ಮತ್ತೊಂದು ಸಭೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ತರಗತಿಗಳ ಆರಂಭದ ಮುನ್ನ ಎಲ್ಲ ಮಕ್ಕಳು ಹಾಗೂ ಶಿಕ್ಷಕರಿಗೆ ರ್ಯಾಂಡಮ್ ಟೆಸ್ಟ್ ನಡೆಸುತ್ತಿರುವುದು ಸೂಕ್ತವಾಗಿದೆ.

ಪ್ರತಿ ವರ್ಷ ಜೂನ್​ನಲ್ಲಿ ಆರಂಭವಾಗುತ್ತಿದ್ದ ಹೊಸ ಶೈಕ್ಷಣಿಕ ವರ್ಷ, ಈ ಬಾರಿ ಜುಲೈ 15ರಿಂದ ಶುರುವಾಗಲಿದೆ. ಕೊಂಚ ವಿಳಂಬವಾಗುತ್ತಿರುವುದು ಹೌದಾದರೂ, ಸದ್ಯದ ಸನ್ನಿವೇಶಗಳಲ್ಲಿ ಇದು ಅನಿವಾರ್ಯವೂ ಹೌದು. ಕರೊನಾ ಪ್ರಕರಣಗಳು ರಾಜ್ಯದಲ್ಲಿ ಗಣನೀಯವಾಗಿ ತಗ್ಗಿರುವುದರಿಂದ ಶಾಲೆ ಪುನರಾರಂಭದ ನಿರ್ಧಾರ ಸರಿಯಾಗಿದೆ. ಇದರಿಂದ ಮಕ್ಕಳು ಉತ್ಸಾಹದಿಂದ ಮತ್ತೆ ಕಲಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಇತರ ರಾಜ್ಯಗಳಲ್ಲೂ ಹಂತ-ಹಂತವಾಗಿ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆ ತರುವುದು ಶಿಕ್ಷಣ ಇಲಾಖೆ ಮುಂದಿರುವ ದೊಡ್ಡ ಸವಾಲಾಗಿದೆ. ಅಧಿಕಾರಿಗಳು ಮತ್ತು ಶಾಲಾ ಸಿಬ್ಬಂದಿ ಈ ನಿಟ್ಟಿನಲ್ಲಿ ಕಾಳಜಿಯಿಂದ ಕಾರ್ಯನಿರ್ವಹಿಸಬೇಕಿದೆ. ಗ್ರಾಮೀಣ ಪ್ರದೇಶಕ್ಕೆ ಕರೊನಾದ ಆರ್ಥಿಕ ಪೆಟ್ಟು ಬಲವಾಗಿ ಬಿದ್ದಿದ್ದು, ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಬೇಕಿದೆ. ಹಾಸ್ಟೆಲ್ ಅಥವಾ ದುಡಿಯಲು ಹೋದ ಊರಿನಲ್ಲಿರುವ ಶಾಲೆಯಲ್ಲೇ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿರುವುದು ಗಮನಾರ್ಹ.

ಕೆಲವೆಡೆ ಕರೊನಾ ಎರಡನೇ ಅಲೆಯ ಆತಂಕವೂ ತಲೆದೋರಿದೆ. ಪಾಲಕರಲ್ಲಿ ಮತ್ತು ಮಕ್ಕಳಲ್ಲಿ ಕರೊನಾ ಬಗ್ಗೆ ಭೀತಿ ಪೂರ್ಣಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಹಾಗಂತ ಮತ್ತೆ ಭಯ ಪಟ್ಟುಕೊಂಡು ಶೈಕ್ಷಣಿಕ ವ್ಯವಸ್ಥೆಯನ್ನು ಸ್ತಬ್ಧವಾಗಿಸುವ ಸನ್ನಿವೇಶವೂ ಈಗಿಲ್ಲ. ಈಗಾಗಲೇ ಕಳೆದ ಹತ್ತು ತಿಂಗಳಲ್ಲಿ ಶಾಲೆಗಳಿಲ್ಲದೆ ಮಕ್ಕಳು, ಅವರ ಪಾಲಕರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ತುಂಬ ಮಕ್ಕಳು ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಖಿನ್ನತೆಯಂಥ ಸಮಸ್ಯೆ ತೀವ್ರ ಪ್ರಮಾಣದಲ್ಲಿ ಕಂಡುಬಂದಿದೆ. ಹಾಗಾಗಿ, ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ಆರಂಭಿಸಬೇಕು. ಶಿಕ್ಷಕರು ಮಕ್ಕಳಿಗೆ ಈಗಿನ ಪರಿಸ್ಥಿತಿಯನ್ನು ಅರ್ಥಮಾಡಿಸಿ, ಕಲಿಕೆಯತ್ತ ಆಸಕ್ತಿ ತೋರುವಂತೆ ಮಾಡಬೇಕು. ಯಾವುದೇ ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net