

ಶಿವಮೊಗ್ಗ: ಗುಣಮಟ್ಟದ ಶಿಕ್ಷಣ ನೀಡುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಾಲಕರ ಸಹಕಾರ, ಪ್ರೋತ್ಸಾಹ ಅಗತ್ಯ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಪ್ರಜ್ಞಾ ಎಜುಕೇಷನ್ ಟ್ರಸ್ಟ್‌ನ ನೂತನ ಪೇಸ್ ಇಂಟರ್ ನ್ಯಾಷನಲ್ ಶಾಲೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ವಿದ್ಯಾಸಂಸ್ಥೆ ಗಳನ್ನು ಸಾಮಾಜಿಕ ಪರಿಕಲ್ಪನೆಯಡಿ ಕಟ್ಟಬೇಕು. ವಿದ್ಯಾ ಸಂಸ್ಥೆಗಳ ವ್ಯಾಪಾರೀಕರಣವಾಗಬಾರದು. ಆಗ ಮಾತ್ರ ಖಾಸಗಿ ವಿದ್ಯಾಸಂಸ್ಥೆಗಳಿಂದ ಕ್ರಾಂತಿ ಸಾಧ್ಯ. ಅದಕ್ಕೆ ಸಾಕ್ಷಿ ಪೇಸ್ ಶಿಕ್ಷಣ ಸಂಸ್ಥೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಜ್ಞಾ ಎಜುಕೇಷನ್ ಟ್ರಷ್ಟ್ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಡವರು, ಕೂಲಿಕಾರ್ಮಿಕರ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಬೇಕು. ವ್ಯಾವಹಾರಿಕ ಹಿನ್ನೆಲೆಯೊಂದರಿಂದಲೇ ಶೈಕ್ಷಣಿಕ ಗುಣಮಟ್ಟ ಅಳೆಯಬಾರದು. ಅದೇ ಉದ್ದೇಶದಿಂದ ಪೇಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸಲಾಗಿದೆ ಎಂದು ಹೇಳಿದರು.
ಪ್ರಜ್ಞಾ ಎಜುಕೇಷನ್ ಟ್ರಸ್ಟ್ ಖಜಾಂಚಿ ಕೆ.ಇ. ಕಾಂತೇಶ್ ಮಾತನಾಡಿ, ಈ ಶಾಲೆಯ ನಿರ್ಮಾಣದಲ್ಲಿ ಡಾ.ಎಂ.ಮೋಹನ್‌ಆಳ್ವ ಅವರ ಕೊಡುಗೆ ಸಾಕಷ್ಟಿದೆ. ಶಾಲೆ ಆರಂಭಿಸಲು ಅವರು ಉತ್ತೇಜನ ನೀಡಿದರು. 165 ವಿದ್ಯಾರ್ಥಿಗಳಿಂದ ಆರಂಭಗೊಂಡ ಪೇಸ್ ಕಾಲೇಜಿನಲ್ಲಿ ಪ್ರಸ್ತುತ 1,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಕೂಡ ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೇಸ್ ಇಂಟರ್‌ನ್ಯಾಷನಲ್ ಶಾಲೆ ಪ್ರಾಚಾರ್ಯ ಎನ್.ಆರ್.ಪವನ್ ಕುಮಾರ್, ಟ್ರಸ್ಟ್‌ನ ಉಪಾಧ್ಯಕ್ಷ ಪ್ರೊ.ಎಚ್.ಆನಂದ್, ಕಾರ್ಯದರ್ಶಿ ಪ್ರೊ.ಬಿ.ಎನ್.ವಿಶ್ವನಾಥಯ್ಯ, ಪ್ರಮುಖರಾದ ಶಾಲಿನಿ ಕಾಂತೇಶ್ ಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಭರತನಾಟ್ಯ ಕಲಾವಿದ ಸಂಜಯ್ ಶಾಂತಾರಾಮ್ ನೇತೃತ್ವದ ಶಿವಪ್ರಿಯ ನಾಟ್ಯ ಶಾಲೆಯ 40 ಕಲಾವಿದರು ಕರ್ನಾಟಕ ವೈಭವ ನೃತ್ಯ ಪ್ರದರ್ಶನ ನೀಡಿದರು. ರಾಷ್ಟ್ರೀಯ ಮಟ್ಟದ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ 84 ಹಾಗೂ ರಾಜ್ಯಕ್ಕೆ 7ನೇ ರಾಂಕ್ ಪಡೆದ ನಗರದ ವೈ.ಎಸ್. ಅನಿಕೇತನ್ ಅವರನ್ನು ಸನ್ಮಾನಿಸಲಾಯಿತು.