

ಬೈಲಕುಪ್ಪೆ : ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ರೋಟರಿ ಮಿಡ್ ಟೌನ್ ಸಂಸ್ಥೆ ಅಧ್ಯಕ್ಷ ತಿರುಮಲಾಪುರ ರಾಜೇಗೌಡ ಹೇಳಿದರು.
ಕಾನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಪಿರಿಯಾಪಟ್ಟಣದ ರೋಟರಿ ಮಿಡ್‌ಟೌನ್‌ವತಿಯಿಂದ ಶುಕ್ರವಾರ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೆ ಹತ್ತಾರು ಪ್ರತಿಭೆ ಇರುತ್ತದೆ. ಶಿಕ್ಷಕರು ಮಕ್ಕಳ ಪ್ರತಿಭಾ ಶಕ್ತಿ ಹೊರತರಲು ಯತ್ನ ಮಾಡಬೇಕು. ಎಸ್ ಡಿಎಂಸಿ ಮತ್ತು ವಿವಿಧ ಸಂಘ ಸಂಸ್ಥೆ ಪ್ರಮುಖರು ಕುಗ್ರಾಮಗಳ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಬೆಂಬಲಿಸಬೇಕು ಎಂದು ಅವರು ಸಲಹೆ ನೀಡಿದರು.
ತಾಲೂಕಿನ ಗ್ರಾಮೀಣ ಭಾಗದ ಅಂಗನವಾಡಿ ಮಕ್ಕಳಿಗೆ ವಿವಿಧ ರೀತಿಯ ಸವಲತ್ತು ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದವರು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಕಾನೂನು ಗೋವಿಂದೇಗೌಡ, ವಕೀಲ ಜವರೇಗೌಡ ಮಾತನಾಡಿದರು. ಶಾಲೆ ವತಿಯಿಂದ ರೋಟರಿ ಅಧ್ಯಕ್ಷ ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಅರುಣ್ ಕುಮಾರ್, ರೋಟರಿ ಮಿಡ್ ಟೌನ್ ಪದಾಧಿಕಾರಿಗಳಾದ ಪುರುಷೋತ್ತಮ ಹೆಗಡೆ, ಸತ್ಯನಾರಾಯಣ. ಬಸವಗೌಡ, ಪ್ರತಾಪ್, ಶಿಕ್ಷಕರಾದ ಸುರೇಶ್, ಶ್ರುತಿ, ಎಸ್‌ಡಿಎಂಸಿ ಸದಸ್ಯರಾದ ರಾಘವೇಂದ್ರ, ಬಸವರಾಜ್, ಪ್ರದೀಪ ಮತ್ತು ವಿದ್ಯಾರ್ಥಿಗಳು ಇದ್ದರು.