

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿ ಕಾರ್ಯದಲ್ಲಿ ಶಿಕ್ಷಕರು ಭಾಗವಹಿಸಿರುವ ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯವನ್ನು ಮರು ನಿಗದಿ ಮಾಡಿ ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
ಸೆ.22ರಿಂದ ಅ.7ರವರೆಗೆ ದಸರಾ ರಜೆ ಇದ್ದ ಕಾರಣ ಶಿಕ್ಷಕರು ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದರು. ಆದರೆ, ನಾಳೆಯಿಂದ (ಅ.8) ರಾಜ್ಯಾದ್ಯಂತ ಶಾಲೆಗಳು ಪುನರಾರಂಭವಾಗುತ್ತಿವೆ. ಶಿಕ್ಷಕರು ಬೋಧನೆ ಮಾಡಲು ಶಾಲೆಗಳಿಗೆ ಹಾಜರಾಗಬೇಕಿದೆ. ಇದೇ ಸಮಯದಲ್ಲಿ ಗಣತಿ ಕಾರ್ಯವನ್ನು ಕೂಡ ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಸಮಯವನ್ನು ಪರಿಷ್ಕರಿಸಿ ಶಿಕ್ಷಣ ಇಲಾಖೆ ಅದೇಶ ಹೊರಡಿಸಿದೆ.
ಬೆಳಗ್ಗೆ 8ರಿಂದ 1 ಗಂಟೆವರೆಗೆ ತರಗತಿ:
ಸಾಮಾನ್ಯವಾಗಿ ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಶಾಲಾ ಅವಧಿ ಇರುತ್ತದೆ. ಇದನ್ನು ಸ್ವಲ್ಪ ಬದಲಾವಣೆ ಮಾಡಿದ್ದು, ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅ.8ರಿಂದ 24ರವರೆಗೆ ಶಾಲಾ ತರಗತಿಗಳನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ವಹಿಸಬೇಕು. ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡು ಅ.24ರೊಳಗೆ ಪೂರ್ಣಗೊಳಿಸಬೇಕು.
ಗ್ರೇಟರ್ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅ.8ರಿಂದ 12ರವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ತರಗತಿಗಳನ್ನು ನಿರ್ವಹಿಸಿ ನಂತರದ ಅವಧಿಯಲ್ಲಿ ಸಮೀಕ್ಷೆಯಲ್ಲಿ ತೊಡಗಿಸಿಕೊಳ್ಳಬೇಕು. ಅ.12ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಸುರಲ್ಕರ್ ವಿಕಾಸ ಕಿಶೋರ್ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯಾದ್ಯಂತ ಸೆ.22ರಿಂದ ಮತ್ತು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅ.4ರಿಂದ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷಾ ಕಾರ್ಯವನ್ನು ರ್ಪೂಣಗೊಳಿಸಲು ಹೆಚ್ಚಿನ ಕಾಲಾವಕಾಶ ಅಗತ್ಯವಿರುವುದನ್ನು ಮನಗಂಡು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿರುವಂತೆ ಶಾಲಾ ಸಮಯವನ್ನು ಪರಿಷ್ಕರಿಸಿ ಆದೇಶಿಸಲಾಗಿದೆ. ಸಮೀಕ್ಷೆ ಜತೆಗೆ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.