ಶಾಲೆಯಲ್ಲಿ ನಡೆಯಿತು ಘೋರ ಕೃತ್ಯ; ಇಂಗ್ಲೀಷ್ ಮಾತನಾಡಿಲ್ಲ ಎಂದು ಮಗುವಿಗೆ ಚಪ್ಪಲಿ ಹಾರ! ಮುಂದೇನಾಯ್ತು?

school
Published on

ಮೇಘಾಲಯ: ಆರನೇ ತರಗತಿಯ ವಿದ್ಯಾರ್ಥಿಗೆ ಶಾಲೆಯ ಆವರಣದಲ್ಲಿ ಇಂಗ್ಲಿಷ್ ಮಾತನಾಡದೇ ಇದ್ದಿದ್ದಕ್ಕಾಗಿ ಆತನ ಕುತ್ತಿಗೆಗೆ ಕೊಳಕು ಬೂಟಗಳ ಮಾಲೆಯನ್ನು ಧರಿಸುವಂತೆ ಮಾಡಿದ ಘಟನೆ ಮೇಘಾಲಯದಲ್ಲಿ ನಡೆದಿದೆ.

ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಮತ್ತು ಸಹ ವಿದ್ಯಾರ್ಥಿಗಳ ಮುಂದೆ ಮಣ್ಣಾದ ಪಾದರಕ್ಷೆಗಳನ್ನು ಬಾಲಕನ ಕುತ್ತಿಗೆಗೆ ಹಾರದಂತೆ ಹಾಕಿಸಿ ಮೆರವಣಿಗೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಪೋಷಕರು, ಶಾಲೆಯು ತಮ್ಮ ಮಗನನ್ನು ಕಾನೂನುಬಾಹಿರವಾದ ತೀವ್ರ ಶಿಕ್ಷೆಗೆ ಒಳಪಡಿಸಿದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ.

"ದಂಡನೆಯು ಅತ್ಯಂತ ಕ್ರೂರವಾಗಿದ್ದು ನನ್ನ ಮಗನ ಕುತ್ತಿಗೆಗೆ ಸ್ಲಿಪ್ಪರ್​ಗಳನ್ನು ಕಟ್ಟಿರುವುದು ಕಾನೂನುಬಾಹಿರವಾಗಿದೆ. ಆದ್ದರಿಂದ ಈ ತರ್ಕಹೀನ ಶಿಕ್ಷೆಯು ಖಂಡನೀಯವಾಗಿದೆ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳೇ ಹೇಳುವಂತೆ, ಮುಖ್ಯ ಶಿಕ್ಷಕರು ಶಾಲಾ ಅಸೆಂಬ್ಲಿಗಳಲ್ಲಿ ಶಿಕ್ಷಿಸಲ್ಪಡುವ ವಿದ್ಯಾರ್ಥಿಗಳ ಹೆಸರನ್ನು ಘೋಷಿಸುತ್ತಾರೆ. ನಂತರ "ಚಪ್ಪಲಿ ಹಾರ ಹಾಕಿಸಿ ಮೆರವಣಿಗೆ ನಡೆಯುತ್ತದೆ" ಇದು ಒಂದು ದಿನ ಬಿಟ್ಟು ಮತ್ತೊಂದು ದಿನ ನಡೆಯುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದು, ಜತೆಗೆ ಶೂಗಳನ್ನು ಕಸದ ತೊಟ್ಟಿಗಳಿಂದ ಎತ್ತಿಕೊಂಡು ಹಾರ ತಯಾರಿಸಲಾಗುತ್ತದೆ ಎಂದು ಆರೋಪಿದ್ದಾರೆ.

ಮತ್ತೂಂದು ದೂರಿನಲ್ಲಿ, ಗ್ರಾಮದ ಮುಖ್ಯಸ್ಥರು "ಶಾಲೆಯಲ್ಲಿ ಕಸದ ತೊಟ್ಟಿಗಳನ್ನು ನೆಕ್ಕುವುದು, ದೈಹಿಕ ಶಿಕ್ಷೆ ಮತ್ತು ಕೂದಲು ಕತ್ತರಿಸುವುದು ಮುಂತಾದ ಅಮಾನವೀಯ ಶಿಕ್ಷೆಗಳನ್ನು ವಿಧಿಸಲಾಗುತ್ತದೆ. ಆ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಅಮಾಯಕ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುವುದನ್ನು ನಿಲ್ಲಿಸುವಂತೆ ಮಾಡಿ, ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.

ಘಟನೆಗೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಸಚಿವ ರಕ್ಕಂ ಎ ಸಂಗ್ಮಾ, ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಗೆ ವರದಿ ನೀಡುವಂತೆ ಹೇಳಿದ್ದಾರೆ. ಘಟನೆಯನ್ನು "ದುರದೃಷ್ಟಕರ' ಎಂದು ಕರೆದ ಶಿಕ್ಷಣ ಸಚಿವರು, ಜಿಲ್ಲಾಧಿಕಾರಿಗಳಿಂದ ವರದಿ ಪಡೆದ ನಂತರ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದರು.

ಅವಿಷ್ಕಾರ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯು ಎಲ್ಲಾ ಭಾರತೀಯ ಭಾಷೆಗಳನ್ನು ರಾಷ್ಟ್ರೀಯ ಭಾಷೆಗಳಾಗಿ ಗುರುತಿಸುತ್ತದೆ ಎಂದು ಉಲ್ಲೇಖಿಸಬೇಕಾಗಿದೆ. ಖಾಸಿ, ಗಾರೋ ಮತ್ತು ಜೈನಿಯಾ ಮೇಘಾಲಯದಲ್ಲಿ ಮಾತನಾಡುವ ಮತ್ತು ಸಂವಹನ ಮಾಡುವ ಪ್ರಮುಖ ಭಾಷೆಗಳಾಗಿವೆ. NEP 2020 ವಿಮರ್ಶಾತ್ಮಕ ಚಿಂತನೆ ಮತ್ತು ನಾವೀನ್ಯತೆಯನ್ನು ಬೆಳೆಸುವಲ್ಲಿ ಮಾತೃಭಾಷೆಯ ಸಕಾರಾತ್ಮಕ ಪರಿಣಾಮವನ್ನು ಗುರುತಿಸುತ್ತದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net