ಪಿರಿಯಾಪಟ್ಟಣ: ತನ್ನ ಅಜ್ಜನೊಂದಿಗೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ತಾಲೂಕಿನ ಮಾಕೋಡು ಗ್ರಾಮದ ಕುಮಾರ ಮತ್ತು ಯಲ್ಲಮ್ಮ ಅವರ ಪುತ್ರ ಭರತ್ (13) ಮೃತ ವಿದ್ಯಾರ್ಥಿ.
ಮಾಕೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಭರತ್ ಶನಿವಾರ ಮುಂಜಾನೆ ತನ್ನ ಅಜ್ಜನೊಂದಿಗೆ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದು ಕೆರೆಯ ಆಳದ ಗುಂಡಿಯಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಗೆ ಸಿಲುಕಿ ಹೊರ ಬರಲಾಗದೆ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯ ತಾಯಿ ಯಲ್ಲಮ್ಮ ಮಾಕೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದು ಅವರಿಗೆ ಒಬ್ಬ ಮಗಳು ಇದ್ದಾರೆ. ಈ ಪ್ರಕರಣ ಕುರಿತಂತೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಸಿಪಿಐ ಗೋವಿಂದರಾಜು ವಿಜಯವಾಣಿಗೆ ತಿಳಿಸಿದ್ದಾರೆ.