

ಲಖನೌ: ಪರೀಕ್ಷೆಗಳಲ್ಲಿ ಮೋಸ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ಶಾಲೆ ಪ್ರಾಂಶುಪಾಲನನ್ನು ಬಂಧಿಸಲಾಗಿದೆ. ಲಖನೌದಿಂದ 300 ಕಿ.ಮೀ. ದೂರವಿರುವ ಮೌ ಜಿಲ್ಲೆಯ ಖಾಸಗಿ ಶಾಲೆಯ ಪ್ರಾಂಶುಪಾಲ, ಮ್ಯಾನೇಜರ್ ಪ್ರವೀಣ್ ಮಲ್ ಎಂಬಾತನೇ ಬಂಧಿತ ವ್ಯಕ್ತಿ.
ಶಾಲೆಯ ಪರೀಕ್ಷೆ ವೇಳೆ ಹೇಗೆ ಮೋಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಆತ ಮಾಹಿತಿ ನೀಡುತ್ತಿದ್ದ. ಇದನ್ನು ಅಲ್ಲೇ ಇದ್ದ ಒಬ್ಬರು ವಿಡಿಯೋ ಮಾಡಿದ್ದಾರೆ. ಅಲ್ಲಿ ಕೆಲ ಪಾಲಕರು ಉಪಸ್ಥಿತರಿದ್ದರು.
ಈ ವಿಡಿಯೋವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ರವಾನಿಸಲಾಗಿದ್ದು. ವಿಡಿಯೋ ಜತೆಗೆ ದೂರನ್ನು ಸಲ್ಲಿಸಲಾಗಿದೆ. ಇದರ ಆಧಾರದ ಮೇಲೆ ಪ್ರವೀಣ್ನನ್ನು ಬಂಧಿಸಲಾಗಿದೆ.
"ನಾನು ಚಾಲೆಂಜ್ ಮಾಡ್ತೀನಿ. ನಮ್ಮ ಯಾವ ವಿದ್ಯಾರ್ಥಿಗಳು ಫೇಲ್ ಆಗುವುದಿಲ್ಲ. ನೀವು ಪರೀಕ್ಷೆ ಬರೆಯುವಾಗ ನಿಮ್ಮನಿಮ್ಮಲ್ಲಿ ಮಾತಾಡಿ. ನಂತರ ಉತ್ತರ ಬರೆಯಿರಿ. ನಿಮ್ಮ ಸರ್ಕಾರಿ ಪರೀಕ್ಷಾ ಕೇಂದ್ರಗಳಲ್ಲಿ ಇರುವವರು ನನಗೆ ಗೆಳೆಯರು. ಹೆದರಬೇಡಿ, ಮಾತಾಡಿ ಬರೆಯಿರಿ. ಯಾರಾದರೂ ಬಂದು ಕಪಾಳಕ್ಕೆ ಹೊಡೆದರೆ ಹೆದರಬೇಡಿ ಸಹಿಸಿಕೊಳ್ಳಿ" ಎಂದು ಪ್ರವೀಣ್ ಮಾತನಾಡಿರುವುದು ವಿಡಿಯೋದಲ್ಲಿದೆ.
"ಯಾವ ಪ್ರಶ್ನೆಯನ್ನು ಉತ್ತರಿಸದೇ ಇರಬೇಡಿ. ಉತ್ತರ ಪತ್ರಿಕೆಯಲ್ಲಿ 100 ರೂಪಾಯಿ ನೋಟು ಇಡಿ. ಶಿಕ್ಷಕರು ಕಣ್ಣುಮುಚ್ಚಿಕೊಂಡು ಅಂಕಗಳನ್ನು ನೀಡುತ್ತಾರೆ. 4 ಅಂಕದ ಪ್ರಶ್ನೆಯಾಗಿದ್ದರೆ, 3 ಅಂಕಗಳನ್ನಾದರೂ ನೀಡುತ್ತಾರೆ" ಎಂದು ಪ್ರವೀಣ್ ಆ ವಿಡಿಯೋದಲ್ಲಿ ಹೇಳಿದ್ದಾನೆ."ಜೈ ಹಿಂದ್, ಜೈ ಭಾರತ್" ಎಂದು ಘೋಷಣೆ ಕೂಗಿ ತನ್ನ ಮಾತು ಮುಗಿಸಿದ್ದಾನೆ.
ಇದಕ್ಕೆ ಕೆಲ ಪಾಲಕರು ಸರಿ ಇದೆ.., ಸರಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ! (ಏಜೆನ್ಸೀಸ್)