ಕಾಫಿ ಒಣಗಿಸಲು ಬಾಡಿಗೆಗಿದೆ ಶಾಲಾ ಆಟದ ಮೈದಾನ

D 25 MDG 1p2
ಸ್ವಚ್ಛಗೊಳಿಸದ ಶಾಲಾ ಕಟ್ಟಡದ ಸ್ಥಿತಿ.
Published on

ಮೂಡಿಗೆರೆ: ಬೆಟ್ಟಗೆರೆ ಗ್ರಾಮದ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಅನುದಾನ ದುರುಪಯೋಗವಾಗಿದೆ. ಬಿಸಿಯೂಟದ ಅಕ್ಕಿ, ಬೇಳೆ ನಾಪತ್ತೆಯಾಗಿದ್ದು, ಶಾಲೆ ಆಟದ ಮೈದಾನವನ್ನು ಶ್ರೀಮಂತರಿಗೆ ಕಾಫಿ ಒಣಗಿಸಲು ಅಕ್ರಮವಾಗಿ ಬಾಡಿಗೆಗೆ ನೀಡಿ ಮುಖ್ಯ ಶಿಕ್ಷಕಿ ಕರ್ತವ್ಯ ಲೋಪಎಸಗಿದ್ದಾರೆ ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಚ್.ಹೊನ್ನೇಶ್ ದೂರಿದರು.
ಶಾಲೆಯಲ್ಲಿ 53 ವಿದ್ಯಾರ್ಥಿಗಳು 9 ಮಂದಿ ಶಿಕ್ಷಕರಿದ್ದಾರೆ. ಮುಖ್ಯಶಿಕ್ಷಕಿ ಚಿಕ್ಕಮಗಳೂರಿನಿಂದ ಶಾಲೆಗೆ ಓಡಾಡುತ್ತಿದ್ದಾರೆ. ವಾರದಲ್ಲಿ 2 ಅಥವಾ 3 ದಿನಮಾತ್ರ ಶಾಲೆಗೆ ಬರುತ್ತಾರೆ. ಆ.15ರಂದು ಸ್ವಾತಂತ್ರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮತ್ತೆ ಶಾಲೆಗೆ ಹಿಂದಿರುಗಿಲ್ಲ. ಇನ್ನೋರ್ವ ಶಿಕ್ಷಕಿಯೂ ಶಾಲೆಗೆ ಆಗಾಗ ಗೈರಾಗುತ್ತಿದ್ದಾರೆ. ಈ ಇಬ್ಬರು ಶಿಕ್ಷಕಿಯರು ಬೆಳಗ್ಗೆ 11:30 ನಂತರ ಅಪರೂಪವಾಗಿ ಶಾಲೆಗೆ ಹಾಜರಾಗುತ್ತಾರೆ. ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಾನು ಶಾಲೆ ಲೆಕ್ಕಪತ್ರವನ್ನು ಪರಿಶೀಲಿಸಿದಾಗ ಪ್ರತಿ ವಿದ್ಯಾರ್ಥಿಗಳಿಂದ ಶಾಲೆ ಅಭಿವೃದ್ಧಿಗೆ ಹೆಚ್ಚುವರಿ 500 ರೂ. ಶುಲ್ಕ ವಸೂಲಿ ಮಾಡಿ ವಂಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿ ದಿನ ಮೊಟ್ಟೆ ನೀಡಿಲ್ಲ. ದಾಸ್ತಾನು ಕೊಠಡಿಯಲ್ಲಿರುವ ಬಿಸಿಯೂಟದ 7 ಕ್ವಿಂಟಲ್ ಅಕ್ಕಿ, 70 ಕೆಜಿ ಬೇಳೆ ನಾಪತ್ತೆಯಾಗಿದೆ ಎಂದು ಆರೋಪಿಸಿದರು.
ಮಕ್ಕಳಿಗೆ ಕಡಿಮೆ ದರದ ಶೂ, ಸಾಕ್ಸ್ ನೀಡಿ ಅದರ ಹಣವನ್ನು ಕಬಳಿಸಲಾಗಿದೆ. ಕಟ್ಟಡ ಸ್ವಚ್ಚಗೊಳಿಸದಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಶೌಚಗೃಹ ಗಬ್ಬುನಾರುತಿದೆ. ವಿದ್ಯಾರ್ಥಿಗಳು ಬಯಲು ಪ್ರದೇಶವನ್ನು ಆಶ್ರಯಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಶಿಕ್ಷಕಿಯನ್ನು ಪ್ರಶ್ನಿಸಿದರೆ ದರ್ಪ ಮೆರೆಯುತ್ತಿದ್ದಾರೆ ಎಂದು ದೂರಿದರು.
ಈ ಅವ್ಯವಹಾರ ಹಾಗೂ ಕರ್ತವ್ಯ ಲೋಪದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ದೂರು ನೀಡಿ ಶಾಲೆಯಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ನಡೆಸಿ ತಪ್ಪಿತಸ್ಥ ಮುಖ್ಯಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net