

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುವುದನ್ನು ತಪ್ಪಿಸಲು ಇಲಾಖೆಯು ತಾಲ್ಲೂಕು, ಜಿಲ್ಲೆ, ವಿಭಾಗೀಯ ಹಂತ ಮತ್ತು ಆಯುಕ್ತರ ಕಚೇರಿ ಹಂತದಲ್ಲಿ ‘ಕುಂದು ಕೊರತೆ ಕೋಶ’ವನ್ನು ಆರಂಭಿಸಲು ಉದ್ದೇಶಿಸಿದೆ.
ಇದರಿಂದ ಶಾಲಾ ಶಿಕ್ಷಣ ಇಲಾಖೆಯ ಕ್ರಮಗಳಿಂದ ಬಾಧಿತರಾಗುವ ಇಲಾಖೆಯ ನೌಕರರು, ಅನುದಾನಿತ ಮತ್ತು ಖಾಸಗಿ ಶಾಲೆಗಳ ನೌಕರರು ಹಾಗೂ ಶಾಲಾ ಆಡಳಿತಮ ಮಂಡಳಿಗಳು ಲಿಖಿತ ರೂಪದಲ್ಲಿ ಸಮರ್ಥನೀಯ ದಾಖಲೆಗಳೊಂದಿಗೆ ತಮ್ಮ ಅಹವಾಲುಗಳನ್ನು ಇಲಾಖೆಯ ಕುಂದು ಕೊರತೆ ಕೋಶಕ್ಕೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಲು ಸೂಕ್ತವಾಗಿರುತ್ತದೆ.
ಈ ಮೂಲಕ ವಿವಿಧ ನ್ಯಾಯಾಲಯಗಳ ಹಾಗೂ ಇಲಾಖೆಯ ಅಮೂಲ್ಯ ಸಮಯ ಮತ್ತು ಮಾನವ ಸಂಪನ್ಮೂಲಗಳು ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಇಲಾಖೆ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ.
ವಾರದೊಳಗೆ ಕ್ರಮ:
ತಾಲ್ಲೂಕು ಹಂತದಲ್ಲಿ ಬಿಇಒ, ಜಿಲ್ಲಾ ಹಂತದಲ್ಲಿ ಡಿಡಿಪಿಐ, ವಿಭಾಗೀಯ ಹಂತದಲ್ಲಿ ಸಹ ನಿರ್ದೇಶಕರು ಮತ್ತು ಆಯುಕ್ತಾಲಯದ ವ್ಯಾಪ್ತಿಯಲ್ಲಿ ಜಂಟಿ ನಿರ್ದೇಶಕರು/ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕುಂದುಕೊರತೆ ಕೋಶ ಕಾರ್ಯನಿರ್ವಹಿಸಲಿದೆ. ಅರ್ಜಿ ಸ್ವೀಕೃತವಾದ 7 ದಿನದೊಳಗೆ ಇತ್ಯರ್ಥಪಡಿಸಲು ಕ್ರಮ ವಹಿಸಲಾಗುತ್ತದೆ
ಕಾನೂನು ಕೋಶದ ಅಧಿಕಾರಿಗಳೊಂದಿಗೆ ನಿರಂತರವಾಗಿ ಇ-ಮೇಲ್‌ನಲ್ಲಿ ್ಚಜ್ಝಿಛಿಜಚ್ಝ್ಚಛ್ಝ್ಝಿಃಜಞಜ್ಝಿ.್ಚಟಞ ಮೂಲಕ ಸಂಪರ್ಕದಲ್ಲಿದ್ದುಕೊಂಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.
ಪ್ರಕರಣಗಳ ಇತ್ಯರ್ಥಕ್ಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ನಿಂದನಾ ದಾವೆಗಳು ದಾಖಲಾಗುತ್ತಿವೆ. ಬಹಳಷ್ಟು ಅರ್ಜಿ/ಮನವಿಗಳು ಇಲಾಖೆಯ ವಿವಿಧ ಹಂತದಲ್ಲಿಯೇ ಇತ್ಯರ್ಥವಾಗುವಂತಹ ಪ್ರಕರಣಗಳಾಗಿರುತ್ತವೆ ಎಂಬುದನ್ನು ಸಹ ಗಮನಿಸಲಾಗಿದೆ.
ಅನೇಕ ಪ್ರಕರಣಗಳಲ್ಲಿ ಅರ್ಜಿದಾರರಿಗೆ ಮಾಹಿತಿ, ಹಿಂಬರಹ ನೀಡದಿರುವುದು ಕಂಡುಬಂದಿದೆ.
568 ಪ್ರಕರಣ ಬಾಕಿ, 1131 ಇತ್ಯರ್ಥ
ಇಲಾಖೆಯ ಬೆಂಗಳೂರು-ಮೈಸೂರು ಆಯುಕ್ತರ ಕಚೇರಿ ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 568 ಪ್ರಕರಣಗಳು ಬಾಕಿ ಇದ್ದು, 1131 ಪ್ರಕರಣಗಳು ಇತ್ಯರ್ಥವಾಗಿದೆ.
ನ್ಯಾಯಾಲಯ ಪ್ರಕರಣಗಳಲ್ಲಿ ಆದೇಶ ಪಾಲನೆ ಮಾಡುವಲ್ಲಿ ಅಥವಾ ಕ್ರಮ ವಹಿಸುವಲ್ಲಿ ವಿಳಂಬ ಧೋರಣೆ ಅನುಸರಿಸದೇ ಆದ್ಯತೆ ಮೇರೆಗೆ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.