

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಮತ್ತು ನಿಯಂತ್ರಣಕ್ಕೆ ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ.
ರಾಜ್ಯಾದ್ಯಂತ ಶಾಲೆಗಳು ಪುನರಾರಂಭವಾಗಿದ್ದು, ಶಾಲೆಗಳಲ್ಲಿ ದೈನಂದಿನ ಶಾಲಾ ಚಟುವಟಿಕೆಗಳು ಆರಂಭವಾಗಿವೆ. ಪ್ರಸ್ತುತ ರಾಜ್ಯದಲ್ಲಿ ಕೊರಾನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಶಾಲೆಗಳಲ್ಲಿ ಪಾಲಿಸಬೆಕಾದ ಸೂಚನೆಗಳು:
ಶಾಲಾ ಮಕ್ಕಳಲ್ಲಿ ಜ್ವರ, ಕೆಮ್ಮು, ನೆಗಡಿ ಹಾಗೂ ಇತರೆ ಲಕ್ಷಣಗಳು ಕಂಡುಬಂದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆ ಹಾಗೂ ಆರೈಕಾ ಕ್ರಮಗಳನ್ನು ಪಾಲಿಸಬೇಕು. ಗುಣಮುಖವಾಗುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು.
ಶಾಲೆಯಲ್ಲಿರುವ ವೇಳೆ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಲ್ಲಿ ಪಾಲಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಬೇಕು.
ಶಾಲಾ ಶಿಕ್ಷಕರು ಹಾಗೂ ಬೋಧಕ ಸಿಬ್ಬಂದಿಯಲ್ಲಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ಅಗತ್ಯ ಕ್ರಮಗಳನ್ನು ಪಾಲಿಸಬೇಕು.
ಕೈಗಳ ಸ್ವಚ್ಛತೆ ಮತ್ತು ಕೆಮ್ಮುವಾಗ, ಸೀನುವಾಗ ಎಚ್ಚರ ವಹಿಸಿ ಕೊರೊನಾ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು.
ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಹೊರಡಿಸಲಾದ ಸುತ್ತೋಲೆ, ಮಾರ್ಗದರ್ಶನ ಮತ್ತು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.