

ಬೆಂಗಳೂರು: 2025-26ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಪೋಷಣಾ ಶಕ್ತಿ ನಿರ್ಮಾಣ ಯೋಜನೆಗೆ (ಮಧ್ಯಾಹ್ನ ಉಪಹಾರ ಯೋಜನೆ) ಸಂಬಂಧಿಸಿದ ಅಡುಗೆ ತಯಾರಿಕಾ ಘಟಕ ವೆಚ್ಚದ ದರವನ್ನು 2025ರ ಮೇ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆ ಮಾಡಲಾಗಿದೆ.
ಪ್ರತಿ ಮಗುವಿಗೆ ಒಂದು ದಿನಕ್ಕೆ ಭರಿಸಬೇಕಾದ ಅಡುಗೆ ತಯಾರಿಕಾ ಘಟಕ ವೆಚ್ಚದ ದರವನ್ನು ನಿಗದಿ ಮಾಡಿ 1ರಿಂದ 10ನೇ ತರಗತಿವರೆಗೆ ಅಡುಗೆ ತಯಾರಿಕಾ ಘಟಕ ವೆಚ್ಚವನ್ನು ಪರಿಷ್ಕರಣೆ ಮಾಡಲಾಗಿದೆ.
ಇದನ್ನು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ನಿರ್ದೇಶಕರು, ಎಲ್ಲ ಜಿಪಂ ಜಿಇಒ, ಡಿಡಿಪಿಐ, ತಾಪಂ ಇಒ ಮತ್ತು ಬಿಇಒ ಗಳು ಪಾಲಿಸಬೇಕಾದ ಷರತ್ತುಗಳನ್ನು ತಿಳಿಸಿದೆ.
ರಾಜ್ಯದ ಪಾಲಿನ ಅಡುಗೆ ವೆಚ್ಚದ ಅಡಿಯಲ್ಲಿ 1ರಿಂದ 8ನೇ ತರಗತಿಗೆ ನಿಗದಿಯಾಗಿರುವ 336.96 ಕೋಟಿ ರೂ.ಗಳನ್ನು ಅನುದಾನದಿಂದ ಭರಿಸಬೇಕು. 9 ಮತ್ತು 10ನೇ ತರಗತಿಗೆ ಸಂಬಂಧಿಸಿದ ಅಡುಗೆ ವೆಚ್ಚವನ್ನು ಕ್ಷೀರ ಭಾಗ್ಯದಡಿ ನಿಗದಿಯಾಗಿರುವ 1,627 ಕೋಟಿ ರೂ.ಗಳನ್ನು ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ನಡಾವಳಿ ಹೊರಡಿಸಿದ್ದಾರೆ.