ಕಂದಕಕ್ಕೆ ಉರುಳಿದ ಶಾಲಾ ಬಸ್; ಇಬ್ಬರು ವಿದ್ಯಾರ್ಥಿಗಳು ಸಾವು; 50ಕ್ಕೂ ಹೆಚ್ಚು ಮಕ್ಕಳಿಗೆ ಗಾಯ| Bus Accident

ವಿಜಯವಾಣಿ - 2025-11-09T213313.961
Published on

ಮುಂಬೈ: ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ 56 ಮಕ್ಕಳನ್ನು ಹೊತ್ತೊಯ್ತಿದ್ದ ಶಾಲಾ ಬಸ್​​(Bus Accident) ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ ಎಂದು ಭಾನುವಾರ(ನ. 09) ವರದಿಯಾಗಿದೆ.

ಚಾಲಿಸ್ಗಾಂವ್(ಜಲ್ಗಾಂವ್) ನ ಮೆಹುನ್ಬರೆಯಲ್ಲಿರುವ ಆಶ್ರಮ ಶಾಲೆ ಬಸ್ ಅಮ್ಲಿಬರಿ ಬಳಿಯ ದೇವಗೈ ಘಾಟ್ ಪ್ರದೇಶದಲ್ಲಿ ಸುಮಾರು 80-100 ಅಡಿ ಆಳದ ಕಣಿವೆಗೆ ಉರುಳಿದೆ. ಘಟನೆಯಲ್ಲಿ ಏಳು ವರ್ಷದ ಮಗು ಮತ್ತು 13 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ.

ದೀಪಾವಳಿ ರಜೆಯ ನಂತರ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಶಾಲೆಯು ಎರಡು ಬಸ್‌ಗಳನ್ನು ಕಳುಹಿಸಿತ್ತು ಎನ್ನಲಾಗಿದೆ. ಅದರಲ್ಲಿ ಒಂದು ಬೆಟ್ಟದ ಮಾರ್ಗದ ಮೂಲಕ ಹಿಂತಿರುಗುವಾಗ ಕಂದಕಕ್ಕೆ ಉರುಳಿದೆ. ತಕ್ಷಣ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ನಡೆಸಿದ್ದು, ತುರ್ತು ಸೇವೆಗಳು ಬರುವ ಮೊದಲೇ ಗಾಯಗೊಂಡ ವಿದ್ಯಾರ್ಥಿಗಳನ್ನು ಇಳಿಜಾರಿನಿಂದ ಮೇಲಕ್ಕೆತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಐಸಿಯುನಲ್ಲಿದ್ದರೆ, ಗಂಭೀರ ಗಾಯಗೊಂಡ 17 ಜನರನ್ನು ನಂದೂರ್ಬಾರ್ ಜಿಲ್ಲಾ ನಾಗರಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದವರು ಅಕ್ಕಲ್ಕುವಾ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್​ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ನಂದೂರ್ಬಾರ್ ಜಿಲ್ಲಾಧಿಕಾರಿ ಡಾ. ಮಿತಾಲಿ ಸೇಥಿ. ಜಿಲ್ಲಾ ಆಡಳಿತವು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಸಹಾಯ ಮಾಡುತ್ತಿದೆ. ಅಗತ್ಯವಿದ್ದರೆ, ನಾವು ಖಾಸಗಿ ವೈದ್ಯಕೀಯ ಸೇವೆಗಳನ್ನು ಸಹ ಬಳಸುತ್ತೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net