ಸಲಿಂಗಕಾಮಕ್ಕೆ ಅಡ್ಡಿಯಾಗಿದೆ ಅಂತ 6 ತಿಂಗಳ ಮಗುವನ್ನು ಕೊಂದ ಪಾಪಿಗಳು ಅರೆಸ್ಟ್​: ಹೆತ್ತ ತಾಯಿಯೇ ಹೆಮ್ಮಾರಿ! Same sex partner

Same sex partner
Published on

ಚೆನ್ನೈ: ಆರು ತಿಂಗಳ ಮಗುವಿನ ಕೊಲೆ ಪ್ರಕರಣದಲ್ಲಿ ತಾಯಿ ಮತ್ತು ಆಕೆಯ ಸಲಿಂಗ ಸಂಗಾತಿಯನ್ನು ( Same sex partner ) ಬಂಧಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಸಾವು ಸಹಜವಲ್ಲ, ಅದೊಂದು ಕೊಲೆ ಎಂದು ತಂದೆ ಅನುಮಾನಿಸಿದ ಬಳಿಕ ಘೋರ ಸತ್ಯ ಹೊರಬಿದ್ದಿದೆ.

ಈ ತಿಂಗಳ ಆರಂಭದಲ್ಲಿ ಮಗು ಸಾವಿಗೀಡಾಯಿತು. ಗಂಟಲಿನಲ್ಲಿ ಹಾಲು ಸಿಲುಕಿಕೊಂಡ ಕಾರಣ ಮಗು ಸಾವಿಗೀಡಾಗಿ ಎಂದು ಆರಂಭದಲ್ಲಿ ತಾಯಿ ಹೇಳಿದಳು. ಇದಾದ ನಂತರ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದರು. ಇದರ ನಡುವೆ ಮಗುವಿನ ಶವವನ್ನು ಕುಟುಂಬದ ಒಡೆತನದ ಹೊಲದಲ್ಲಿ ಹೂಳಲಾಯಿತು.

ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಮಗುವಿನ ತಂದೆ ಪೊಲೀಸ್ ಠಾಣೆಗೆ ತೆರಳಿ ತನ್ನ ಹೆಂಡತಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ ಎಂದು ಹೇಳಿ, ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ದಾಖಲಿಸಿದರು. ತಮ್ಮ ಪತ್ನಿಗೆ ಬೇರೆ ಮಹಿಳೆಯ ಜತೆ ಸಂಬಂಧ ಇರುವುದಕ್ಕೆ ಸಾಕ್ಷಿಯಾಗಿ ಫೋಟೋಗಳು, ಮೆಸೇಜ್​ಗಳು ಮತ್ತು ವಿಡಿಯೋಗಳನ್ನು ಪೊಲೀಸರ ಮುಂದಿಟ್ಟರು. ತನ್ನ ಮಗುವಿನ ಸಾವು ಕೊಲೆಯಾಗಿರಬಹುದು ಎಂದು ಶಂಕಿಸಿ, ದೂರು ದಾಖಲಿಸಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ತನಿಖೆ ಆರಂಭಿಸಿದರು. ಅದರ ಭಾಗವಾಗಿ ಈ ವಾರದ ಆರಂಭದಲ್ಲಿ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪರೀಕ್ಷಾ ವರದಿಯಲ್ಲಿ ಮಗು ಉಸಿರುಗಟ್ಟಿ ಸಾವಿಗೀಡಾಗಿದೆ ಎಂದು ತಿಳಿದುಬಂತು. ಮಗುವಿನ ಸಾವು ಕೊಲೆಯೇ ಎಂಬುದನ್ನು ದೃಢಪಡಿಸಲು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆಯ ಸಮಯದಲ್ಲಿ, ಮಹಿಳೆ ತನ್ನ ಗಂಡನ ಮಗುವನ್ನು ನಾನು ಬಯಸುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ. ಅಲ್ಲದೆ, ನನ್ನ ಗಂಡನಿಗೆ ನನ್ನ ಬಗ್ಗೆ ಪ್ರೀತಿಯೇ ಇಲ್ಲ. ಅಷ್ಟೇ ಏಕೆ ನನ್ನನ್ನು ಪರಿಗಣನೆಗೂ ತೆಗೆದುಕೊಳ್ಳುವುದಿಲ್ಲ ಎಂದು ಆರೋಪಿ ಪತ್ನಿ ಪೊಲೀಸರಿಗೆ ಬಹಿರಂಗಪಡಿಸಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net