School Bus Accident: ಮಕ್ಕಳ ಕಿರುಚಾಟ, ಬೆಚ್ಚಿಬಿದ್ದ ಜನ: ಬ್ರೇಕ್ ಫೇಲ್ ಆಗಿ ಗೋಡೆಗೆ ಗುದ್ದಿದ ಸ್ಕೂಲ್ ಬಸ್!

School Bus Accident
ರಿಷಿಕೇಶದಲ್ಲಿ ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿ ಕಾಂಪೌಂಡ್​ಗೆ ನುಗ್ಗಿದ ಶಾಲಾ ಬಸ್.
Published on: 

School Bus Accident: ಉತ್ತರಾಖಂಡದ ರಿಷಿಕೇಶದಲ್ಲಿ ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿದ ಶಾಲಾ ಬಸ್ ಆಶ್ರಮದ ಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ಶಾಲೆಯ ಮೂವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉತ್ತರ ಪ್ರದೇಶದ ಫಿರೋಜಾಬಾದ್‌ನಿಂದ ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸಿದ್ದ ಖಾಸಗಿ ಶಾಲೆಯ ಬಸ್ ಅಪಘಾತಕ್ಕೀಡಾಗಿದೆ. ವಿದ್ಯಾರ್ಥಿಗಳನ್ನು ರಿಷಿಕೇಶ, ಲಕ್ಷ್ಮಣ ಝೂಲಾ ಹಾಗೂ ಹರಿದ್ವಾರಕ್ಕೆ ಕರೆದೊಯ್ಯುತ್ತಿದ್ದ ವೇಳೆ, ಮುನಿ ಕಿ ರೇತಿ ಪ್ರದೇಶದ ಬ್ರಹ್ಮಾನಂದ ಮೋರ್ ಸಮೀಪದ ಪಿಡಬ್ಲ್ಯುಡಿ ಜಂಕ್ಷನ್ ಬಳಿ ಈ ಘಟನೆ ಸಂಭವಿಸಿದೆ.

ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿದ ಬಸ್

ಇಳಿಜಾರಿನಲ್ಲಿ ಚಲಿಸುತ್ತಿದ್ದಾಗ ಬಸ್‌ನ ಬ್ರೇಕ್‌ಗಳು ಏಕಾಏಕಿ ವಿಫಲವಾಗಿವೆ ಎನ್ನಲಾಗಿದೆ. ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ವೇಗವಾಗಿ ಕೆಳಮುಖವಾಗಿ ಚಲಿಸಿ, ರಸ್ತೆ ಬದಿಯಲ್ಲಿದ್ದ ಆಶ್ರಮದ ಕಾಂಪೌಂಡ್ ಗೋಡೆಯನ್ನು ಒಡೆದು ಒಳನುಗ್ಗಿದೆ. ಬಸ್ ಆಶ್ರಮದ ಆವರಣಕ್ಕೆ ನುಗ್ಗುತ್ತಿದ್ದಂತೆ ಮಕ್ಕಳಲ್ಲಿ ಆತಂಕ ಮನೆಮಾಡಿದೆ. ಮಕ್ಕಳು ಸಹಾಯಕ್ಕಾಗಿ ಕಿರುಚುತ್ತಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ ತಂಡ

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ, ಬಸ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.

ಈ ಅಪಘಾತದಲ್ಲಿ ಬಸ್ ಚಾಲಕ ಜೈ ಪ್ರಕಾಶ್, ಸಹಾಯಕ ಅವಧೇಶ್ ಹಾಗೂ ಶಾಲೆಯ ಪ್ರಾಂಶುಪಾಲೆ ರಜನಿ ಸರಸ್ವತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಅರ್ಜೆಂಟೀನಾದಲ್ಲಿ ವರುಣನ ರುದ್ರನರ್ತನ: ಟೆನ್ನಿಸ್ ಬಾಲ್ ಗಾತ್ರದ ಆಲಿಕಲ್ಲಿಗೆ ನಲುಗಿದ ನಗರ! | Argentina Hailstorm

ಮಕ್ಕಳಿಗೆ ಆಶ್ರಮದಲ್ಲಿ ವಸತಿ ವ್ಯವಸ್ಥೆ

ಅಪಘಾತದಿಂದ ಆತಂಕಗೊಂಡಿದ್ದ ವಿದ್ಯಾರ್ಥಿಗಳನ್ನು ಬಳಿಕ ಕೈಲಾಶ್ ಗೇಟ್ ಪ್ರದೇಶದ ಮಧುಬನ್ ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಮಕ್ಕಳ ವಾಸ್ತವ್ಯಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಸ್‌ನ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.