ತಾಯಿಯ ಬರ್ತ್‌ಡೇಗೆ ಉಡುಗೊರೆ ತರಲು ಕೂಡಿಟ್ಟಿದ್ದ ಹಣವನ್ನು ಕರೊನಾ ನಿಧಿಗೆ ಕೊಟ್ಟ ಶಾಲಾ ಬಾಲಕ!

donet april
Published on

ಭಾಲ್ಕಿ: ತಾಯಿಯ ಜನ್ಮದಿನದಂದು ಉಡುಗೊರೆ ತಂದುಕೊಡಲು ವರ್ಷವಿಡೀ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹಿಸಿದ್ದ ಹಣವನ್ನು ಶಾಲಾ ಬಾಲಕನೊಬ್ಬ ಕರೊನಾ ನಿಧಿಗೆ ನೀಡಿ, ಅಪರೂಪದ ಔದಾರ್ಯ ಮೆರೆದಿದ್ದಾನೆ.

ಪಾಲಕರು ಮತ್ತು ಸಂಬಂಧಿಕರು ಬಿಸ್ಕೆಟ್, ಚಾಕೋಲೆಟ್‌ಗಾಗಿ ಕೊಡುತ್ತಿದ್ದ ಹಣದಲ್ಲಿ ಒಂದಿಷ್ಟು ಉಳಿಸಿಕೊಳ್ಳುತ್ತಿದ್ದ ಸತ್ಯಸಾಯಿ ಪಬ್ಲಿಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಆರ್ಯನ್, ಅದನ್ನು ಗಲ್ಲಾ ಪೆಟ್ಟಿಗೆಗೆ ಹಾಕುತ್ತಿದ್ದ. ಹೀಗೆ ಸಂಗ್ರಹವಾದ ಹಣವನ್ನು ತನ್ನ ತಾಯಿ ಡಾ. ವಿಜಯಶ್ರೀಯವರ ಜನ್ಮ ದಿನದಂದು ಹೊರತೆಗೆದು ಅದರಿಂದ ಏನಾದರೂ ಗಿಫ್ಟ್ ತಂದು ಕೊಟ್ಟು ಸಂಭ್ರಮಿಸುತ್ತಿದ್ದ. ಈ ಸಲ ಕರೊನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ಕಳಿಸಲು ನಿರ್ಧರಿಸಿದ. ಗಲ್ಲಾ ಪೆಟ್ಟಿಗೆ ಒಡೆದು ನೋಡಿದಾಗ ಅದರಲ್ಲಿ 1664 ರೂ. ಇದ್ದವು. ಅದನ್ನೇ ಸಿಎಂ ಪರಿಹಾರ ನಿಧಿಗೆ ಕೊಡುವುದಾಗಿ ತಂದೆ-ತಾಯಿಗೆ ಹೇಳಿದಾಗ ಅವರಿಗೂ ಖುಷಿಯಾಗಿದೆ.

ಕೂಡಲೇ ಈ ಮೊತ್ತಕ್ಕೆ ಚೆಕ್ ರೆಡಿ ಮಾಡಿದ್ದಾರೆ. ಶುಕ್ರವಾರ ಭಾಲ್ಕಿಗೆ ಆಗಮಿಸಿದ್ದ ತಹಸೀಲ್ದಾರ್ ಅಣ್ಣಾರಾವ ಪಾಟೀಲ್ ಅವರಿಗೆ ಆ ಚೆಕ್ ಅನ್ನು ಬಾಲಕನೇ ಹಸ್ತಾಂತರಿಸಿದ್ದಾನೆ. ಈತನ ಕಾಳಜಿಗೆ ಅಧಿಕಾರಿಗಳು ಭೇಷ್ ಎಂದಿದ್ದಾರೆ. ಮುಂದೆ ಸೈನ್ಯಕ್ಕೆ ಸೇರಿ ದೇಶ ಸೇವೆ ಸಲ್ಲಿಸುವ ಧ್ಯೇಯ ಈ ಬಾಲಕನದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net