ಜಿಲ್ಲಾದ್ಯಂತ ಶಾಲಾ-ಕಾಲೇಜು ಪುನಾರಾರಂಭ: ನಗರದ ನೂತನ ಸರ್ಕಾರಿ ಪಿಯು ಕಾಲೇಜಿನಲ್ಲಿ ಅವ್ಯವಸ್ಥೆ

23-klr-7 3
Published on

ಕೋಲಾರ: ಜಿಲ್ಲೆಯಾದ್ಯಂತ 9ನೇ ತರಗತಿಯಿಂದ ಪಿಯುಸಿವರೆಗಿನ ತರಗತಿಗಳು ಸೋಮವಾರದಿಂದ ಪುನಾರಾರಂಭಗೊಂಡಿದ್ದು, ಕೆಲ ಶಾಲೆ, ಕಾಲೇಜುಗಳಲ್ಲಿ ತಳಿರು ತೋರಣ ಕಟ್ಟಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ನಗರದ ನೂತನ ಸರ್ಕಾರಿ ಪಿಯು ಕಾಲೇಜಿನಲ್ಲಿ ಅವ್ಯವಸ್ಥೆ, ಮಾರ್ಗಸೂಚಿ ಉಲ್ಲಂಘನೆ ಕಂಡುಬಂತು.

ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಡಿ 126 ಸರ್ಕಾರಿ ಶಾಲೆಗಳು, 60 ಅನುದಾನಿತ ಶಾಲೆ, 185 ಅನುದಾನ ರಹಿತ ಶಾಲೆಗಳಿವೆ, ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯಡಿ ಬರುವ ವಸತಿ ಶಾಲೆಗಳು 30 ಇದ್ದು, ಒಟ್ಟು 401 ಪ್ರೌಢಶಾಲೆಗಳು ಅಧಿಕೃತವಾಗಿ ಪುನಾರಾರಂಭಗೊಂಡಿವೆ.

ಕರೊನಾ ಮಾರ್ಗಸೂಚಿ ಪಾಲಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಭೌತಿಕ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಮಕ್ಕಳು ಶಾಲೆ ಕಡೆ ಹೆಜ್ಜೆ ಹಾಕಿದ್ದರು. ನಗರದ ಸರ್ಕಾರಿ ಬಾಲಕರ, ಬಾಲಕಿಯರ ಪಿಯು ಕಾಲೇಜಿನ ಮುಖ್ಯದ್ವಾರದಲ್ಲಿ ತಳಿರು ತೋರಣ ಕಟ್ಟಿ ಮಕ್ಕಳನ್ನು ಸ್ವಾಗತಿಸಲಾಯಿತು.

ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಮಕ್ಕಳನ್ನು ಶಾಲಾ ಆವರಣದಲ್ಲಿ ದೈಹಿಕ ಅಂತರದೊಂದಿಗೆ ನಿಲ್ಲಿಸಿ ಎಲ್ಲ ಮಕ್ಕಳಿಗೂ ಮಾಸ್ಕ್ ನೀಡಿ ಕೊಠಡಿಯೊಳಗೆ ಹೇಗೆ ಕುಳಿತುಕೊಳ್ಳಬೇಕು ಎಂದು ಶಿಕ್ಷಕರು ಮಾರ್ಗದರ್ಶನ ನೀಡಿ ಕೊಠಡಿಯೊಳಕ್ಕೆ ಕಳುಹಿಸಿಕೊಟ್ಟರು. ಪ್ರತಿ ಬೆಂಚಿನಲ್ಲಿ ಒಬ್ಬ ವಿದ್ಯಾರ್ಥಿನಿಯಂತೆ ಪ್ರತಿ ತರಗತಿಗೆ ಗರಿಷ್ಠ 20 ವಿದ್ಯಾರ್ಥಿಗಳಿದ್ದರು.

ನಗರದ ಸರ್ಕಾರಿ ಪಿಯು ಕಾಲೇಜು ವಿಭಾಗದಲ್ಲಿನ ದೊಡ್ಡ ಕೊಠಡಿಗಳಲ್ಲಿ ಒಂದೊಂದು ಬೆಂಚಿನಲ್ಲಿ ಮೂರು ಮಕ್ಕಳಂತೆ 40ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಕುಳ್ಳುರಿಸಿದ್ದು ಕಂಡುಬಂತು.

ಶೇ 85 ಹಾಜರಾತಿ: ಜಿಲ್ಲೆಯ 401 ಪ್ರೌಢಶಾಲೆಗಳಲ್ಲಿ 9ನೇ ತರಗತಿಗೆ ದಾಖಲಾಗಿರುವ 21694 ವಿದ್ಯಾರ್ಥಿಗಳ ಪೈಕಿ 18440 ವಿದ್ಯಾರ್ಥಿಗಳು ಹಾಗೂ 10ನೇ ತರಗತಿಗೆ ದಾಖಲಾಗಿರುವ 22257 ಮಕ್ಕಳ ಪೈಕಿ 18918 ಮಂದಿ ಹಾಜರಾಗಿದ್ದಾರೆ. ಒಟ್ಟಾರೆ 9,10ನೇ ತರಗತಿಗೆ ದಾಖಲಾಗಿರುವ 43951 ಮಕ್ಕಳ ಪೈಕಿ 37358 ಮಕ್ಕಳು ಹಾಜರಾಗಿದ್ದು, ಶೇ.85 ಮಕ್ಕಳು ಮೊದಲ ದಿನವೇ ಹಾಜರಾಗಿದ್ದರು.

ಡಿಸಿ, ಜಿಪಂ ಸಿಇಒ ಭೇಟಿ: ಶಾಲೆಗಳಿಗೆ ಡಿಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಸಿ ಭೇಟಿ-ಮೆಚ್ಚುಗೆ: ಕೋಲಾರ ತಾಲೂಕಿನ ಅರಾಭಿಕೊತ್ತನೂರು ಪ್ರೌಢಶಾಲೆಗೆ ಭೇಟಿ ನೀಡಿದ್ದ ವಿಭಾಗಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಕ್ಕಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ರೋಟರಿ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್, ಕಾರ್ಯದರ್ಶಿ ಸುಧಾಕರ್, ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಮುಖಂಡ ಕೆ.ಜಯದೇವ್ ಮತ್ತಿತರರಿದ್ದರು.

ಪಿಯುಗೆ ಶೇ.90 ಹಾಜರಿ: ಜಿಲ್ಲೆಯಲ್ಲಿ 32 ಸರ್ಕಾರಿ, 10 ಅನುದಾನಿತ ಹಾಗೂ 87 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿದ್ದು,15382 ವಿದ್ಯಾರ್ಥಿಗಳ ಪೈಕಿ ಮೊದಲ ದಿನ 7800 ವಿದ್ಯಾರ್ಥಿಗಳ ಹಾಜರಿಗೆ ಸೂಚಿಸಲಾಗಿ ಇದರಲ್ಲಿ 7021 ಮಂದಿ ಹಾಜರಾಗಿದ್ದರು.

ಅವ್ಯವಸ್ಥೆಯ ಆಗರ: ನಗರದ ಸರ್ಕಾರಿ ನೂತನ ಪಿಯು ಕಾಲೇಜು ಶಾಲಾರಂಭದ ದಿನವೇ ಅವ್ಯವಸ್ಥೆಯ ಆಗರವಾಗಿತ್ತು. ಭಾನುವಾರ ರಾತ್ರಿ ಮಳೆ ಸುರಿದ ಹಿನ್ನೆಲೆಯಲ್ಲಿ ಶಾಲೆ ಆವರಣ ಕೆಸರು ಗದ್ದೆಯಂತಾಗಿತ್ತು. ಶಾಲಾ ಆವರಣದ ಮೂಲೆಯಲ್ಲಿ ರಾಶಿ ಬಿದ್ದಿದ್ದ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲು ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ್ದು ಕಂಡುಬಂತು. ವಿಷಯ ತಿಳಿದ ಪಿಯು ಉಪನಿರ್ದೇಶಕ ರಾಮಚಂದ್ರಪ್ಪ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿ ಅವ್ಯವಸ್ಥೆಗೆ ಆಸಮಾಧಾನ ವ್ಯಕ್ತಪಡಿಸಿ ಕಾಲೇಜು ಪ್ರಾಂಶುಪಾಲರು, ಉಪ ಪ್ರಾಂಶುಪಾಲರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದರು.

ಮಾರ್ಗಸೂಚಿ ಉಲ್ಲಂಘನೆ :  ನೂತನ ಸರ್ಕಾರಿ ಪಿಯು ಕಾಲೇಜಿನ ವಿವಿಧ ವಿಭಾಗಗಳಲ್ಲಿ ಕರೊನಾ ಮಾರ್ಗಸೂಚಿ ಉಲ್ಲಂಘನೆ ಕಂಡುಬಂತು. ಮಾಸ್ಕ್ ಧರಿಸದೆ ಕೊಠಡಿಗಳಲ್ಲಿ ದೈಹಿಕ ಅಂತರವನ್ನೂ ಮರೆತು ಒಂದೊಂದು ಬೆಂಚಿನಲ್ಲಿ ನಾಲ್ಕು ವಿದ್ಯಾರ್ಥಿನಿಯರು ಕುಳಿತಿದ್ದರು. ಶಿಕ್ಷಕರು ಕೂಡ ಪರಸ್ಪರ ಅಂತರ ಪಾಲನೆಗೆ ಸೂಚಿಸದೆ ನಿರ್ಲಕ್ಷ್ಯ ತಾಳಿದ್ದರು.

ಜಿಲ್ಲಾದ್ಯಂತ 9 ಮತ್ತು 10ನೇ ತರಗತಿಗೆ ದಾಖಲಾಗಿರುವ ಮಕ್ಕಳಲ್ಲಿ ಶೇ 85 ಮಂದಿ ಹಾಜರಾಗಿದ್ದಾರೆ. ಶಾಲೆಗೆ ಬಂದ ಮಕ್ಕಳಿಗೆ ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಲಾಗಿದೆ. ಇದರೊಂದಿಗೆ ಯಾವ ಯಾವ ತರಗತಿಗಳ ಮಕ್ಕಳು ಯಾವ ಯಾವ ದಿನ ಶಾಲೆಗೆ ಬರಬೇಕು ಎಂಬುದರ ಮಾಹಿತಿ ನೀಡಲಾಗಿದೆ. ಎಸ್.ಜಿ.ನಾಗೇಶ್, ಡಿಡಿಪಿಐ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net