ರಾಜ್ಯದಲ್ಲಿ ಶಾಲಾ ದಾಖಲಾತಿ ಚುರುಕು: ದ.ಕ, ಶಿರಸಿ, ಚಿತ್ರದುರ್ಗ ಮುಂಚೂಣಿಯಲ್ಲಿ; ಬೆಂಗಳೂರು ದಕ್ಷಿಣಕ್ಕೆ ಕೊನೇ ಸ್ಥಾನ

School
Published on

| ಭರತ್ ಶೆಟ್ಟಿಗಾರ್ ಮಂಗಳೂರು

ಕರೊನಾ ಮೂರನೇ ಅಲೆ ಭೀತಿ ನಡುವೆಯೂ ರಾಜ್ಯದಲ್ಲಿ ಶಾಲೆ ಆರಂಭಕ್ಕೆ ಮಕ್ಕಳ ಪಾಲಕರ ಒತ್ತಡ ಹೆಚ್ಚಾಗುತ್ತಿದೆ. ಸರ್ಕಾರವೂ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಆ.23ರಿಂದ ಪ್ರೌಢಶಾಲೆ, ಕಾಲೇಜು (9ರಿಂದ 12ನೇ ತರಗತಿ) ಆರಂಭಿಸಲು ದಿನಾಂಕ ನಿಗದಿ ಮಾಡಿದ್ದು, ಸೆಪ್ಟೆಂಬರ್​ನಲ್ಲಿ ಉಳಿದ ತರಗತಿಗಳ ಆರಂಭಕ್ಕೆ ಉದ್ದೇಶಿಸಿದೆ. ಈ ನಡುವೆ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆಯೂ ಉತ್ತಮವಾಗಿಯೇ ಸಾಗಿದೆ.

ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ (ಶೇ.98.10), ಶಿರಸಿ(ಶೇ.98.36) ಮತ್ತು ಚಿತ್ರದುರ್ಗ ಜಿಲ್ಲೆ(ಶೇ.98.08) ಶಾಲಾ ದಾಖಲಾತಿಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು, ನಿಗದಿತ ಗುರಿ ಪೂರ್ಣಗೊಳಿಸುವತ್ತ ಸಾಗಿವೆ. ಬೆಂಗಳೂರು ದಕ್ಷಿಣ ಶೇ.76, ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ ಶೇ.77 ದಾಖಲಾತಿಯೊಂದಿಗೆ ಕೊನೇ ಎರಡು ಸ್ಥಾನದಲ್ಲಿದೆ ಎನ್ನುವುದು ಆಗಸ್ಟ್ 12ರ ವರೆಗಿನ ಶಿಕ್ಷಣ ಇಲಾಖೆ ಅಂಕಿ- ಅಂಶ.

ಶಿರಸಿಯಲ್ಲಿ ಸರ್ಕಾರಿ ಶಾಲೆಗೆ ಶೇ.97, ಅನುದಾನಿತ ಶೇ.113, ಅನುದಾನ ರಹಿತ ಶಾಲೆಗಳಿಗೆ ಶೇ.93 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ- ಶೇ.101, ಅನುದಾನಿತ -ಶೇ.107 ಮತ್ತು ಅನುದಾನ ರಹಿತ- ಶೇ.94 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ - ಶೇ.96, ಅನುದಾನಿತ- ಶೇ.128 ಮತ್ತು ಅನುದಾನ ರಹಿತ ಶಾಲೆಗಳಿಗೆ ಶೇ.87 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಬಹುತೇಕರು ಈ ಬಾರಿಯೂ ಮಕ್ಕಳನ್ನು ದೂರದ ಶಾಲೆಗಳಿಗೆ ಕಳುಹಿಸುವ ಬದಲು ಮನೆ ಸಮೀಪದ ಶಾಲೆಗಳಿಗೇ ಸೇರಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗೆ ಹೆಚ್ಚು ದಾಖಲಿಸಿದ್ದಾರೆ. ಅದರಲ್ಲೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆ, ಇಂಗ್ಲಿಷ್ ಶಿಕ್ಷಣ ಇರುವ ಸರ್ಕಾರಿ ಶಾಲೆಗಳಿಗೆ ದಾಖಲಾತಿಗಾಗಿ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಇಲಾಖಾ ಅಧಿಕಾರಿಗಳು.

ಶಾಲಾ ದಾಖಲಾತಿ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂದೆ ಇದೆ. ನಿಗದಿತ ಗುರಿ ಪೂರ್ಣಗೊಳಿಸುವತ್ತ ಸಾಗಿದೆ. ಸರ್ಕಾರಿ ಶಾಲೆಗಳಿಗೆ ಹಾಗೂ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಈಗಾಗಲೆ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

| ಮಲ್ಲೇಸ್ವಾಮಿ ಡಿಡಿಪಿಐ, ದ.ಕನ್ನಡ ಜಿಲ್ಲೆ

ಒಂದನೇ ತರಗತಿ ದಾಖಲಾತಿ

ಸರ್ಕಾರಿ ಶಾಲೆಗಳಲ್ಲಿ ಈ ಬಾರಿಯೂ ಒಂದನೇ ತರಗತಿಗೆ ನಿಗದಿಪಡಿಸಲಾದ ಗುರಿ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ ಶೇ.120, ವಿಜಯಪುರ ಶೇ.119, ಬೆಂಗಳೂರು ದಕ್ಷಿಣದಲ್ಲಿ ಶೇ.117 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದಾರೆ. ದಕ್ಷಿಣ ಕನ್ನಡ ಶೇ.112, ಉಡುಪಿ ಜಿಲ್ಲೆಯಲ್ಲಿ ಶೇ.106 ಮಕ್ಕಳು ಒಂದನೇ ತರಗತಿಗೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. 1ರಿಂದ 10ನೇ ತರಗತಿ ವರೆಗಿನ ಸರ್ಕಾರಿ ಶಾಲೆ ದಾಖಲಾತಿ ಅಂಕಿ-ಅಂಶದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಡ್ಯ ಜಿಲ್ಲೆ ಶೇ.98 ದಾಖಲಾತಿಯೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿವೆ.

ಅನುದಾನಿತ ಶಾಲೆಗಳು ಮುಂದು

ರಾಜ್ಯದ ಅನುದಾನಿತ ಶಾಲೆಗಳಲ್ಲಿ ಒಟ್ಟು 10,88,561 ಸೀಟ್​ಗಳಿವೆ. ಈ ಗುರಿ ಮೀರಿ ಅಂದರೆ, 11,97,526(ಶೇ.110) ವಿದ್ಯಾರ್ಥಿಗಳು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ದಾಖಲಾತಿ ಉತ್ತಮವಾಗಿದ್ದು, ರಾಜ್ಯದ ಒಟ್ಟು 45,57,511 ಸೀಟ್ ಗುರಿಯಲ್ಲಿ ಈಗಾಗಲೆ 44,53,032(ಶೇ.97.71) ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ 46,36,386 ಸೀಟ್​ಗಳ ಪೈಕಿ 38,91,542(ಶೇ.83.93) ಸೀಟು ಭರ್ತಿಯಾಗಿವೆ.

ಉಚಿತ ಟಾಕಿಂಗ್ ಲ್ಯಾಪ್​ಟಾಪ್

ಬೆಂಗಳೂರು: ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಹಾಗೂ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಉಚಿತ ‘ಟಾಕಿಂಗ್ ಲ್ಯಾಪ್​ಟಾಪ್’ ವಿತರಿಸಲು ಸಮಗ್ರ ಯೋಜನೆ ರೂಪಿಸಲಾಗಿರುವ ಹಿನ್ನೆಲೆಯಲ್ಲಿ, ಈ ಸಂಬಂಧ ಸರ್ಕಾರದ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್ ಕೈಬಿಟ್ಟಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಟಾಕಿಂಗ್ ಲ್ಯಾಪ್​ಟಾಪ್ ವಿತರಣೆಗೆ ಸರ್ಕಾರ ಯೋಜನೆ ರೂಪಿಸಿಲ್ಲ ಎಂದು ಆಕ್ಷೇಪಿಸಿ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಸೋಮವಾರ ವಿಚಾರಣೆ ನಡೆಸಿತು. ವಕೀಲ ಉಮಾಪತಿ, 2021ರ ಮಾ.18ರಂದು ಹೈಕೋರ್ಟ್ ನೀಡಿದ್ದ ಆದೇಶದ ಅನುಸಾರ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಎಸ್​ಎಸ್​ಎಲ್​ಸಿ ಹಾಗೂ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಉಚಿತ ಟಾಕಿಂಗ್ ಲ್ಯಾಪ್​ಟಾಪ್ ವಿತರಣೆಗೆ ಸರ್ಕಾರ ಸಮಗ್ರ ಯೋಜನೆ ರೂಪಿಸಿದ್ದು, ಆದೇಶದ ಪ್ರತಿಯನ್ನು ತಮಗೂ ಒದಗಿಸಿದೆ ಎಂದು ತಿಳಿಸಿದರಲ್ಲದೆ, ಈ ಸಂಬಂಧ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜು.27ರಂದು ಹೊರಡಿಸಿದ್ದ ಆದೇಶ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ಪೀಠ, ಸರ್ಕಾರದ ವಿರುದ್ಧದ ನ್ಯಾಯಾಂಗ ಪ್ರಕರಣವನ್ನು ಕೈಬಿಟ್ಟು, ಅರ್ಜಿ ಇತ್ಯರ್ಥಪಡಿಸಿತು.

ಯೋಜನೆಯ ಷರತ್ತುಗಳು

  • ಅಂಧ ವಿದ್ಯಾರ್ಥಿ ಭಾರತದ ಪ್ರಜೆಯಾಗಿರಬೇಕು. 10 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಿರುವ ಬಗ್ಗೆ ತಹಸೀಲ್ದಾರರಿಂದ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು.
  • ಎಸ್​ಎಸ್​ಎಲ್​ಸಿ ಹಾಗೂ ನಂತರದ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಮಾತ್ರ ಟಾಕಿಂಗ್ ಲ್ಯಾಪ್​ಟಾಪ್ ಒದಗಿಸಲಾಗುವುದು.
  • ಅರ್ಹ ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳ ಮುಖ್ಯಸ್ಥರಿಂದ ದೃಢೀಕೃತ ಶಿಫಾರಸಿನೊಂದಿಗೆ ಅರ್ಜಿ ಸಲ್ಲಿಸಬೇಕು.
  • ಯಾವುದೇ ಆದಾಯದ ಮಿತಿ ಇಲ್ಲ. ಶೇ.40ಕ್ಕೂ ಅಧಿಕ ದೃಷ್ಟಿದೋಷ ಉಳ್ಳವರು ಸೌಲಭ್ಯಕ್ಕೆ ಅರ್ಹ
  • ಲ್ಯಾಪ್​​ಟಾಪ್​ಗಳನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡುವಂತಿಲ್ಲ.
  • ಓರ್ವ ವಿದ್ಯಾರ್ಥಿಗೆ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಉಚಿತ ಲ್ಯಾಪ್​ಟಾಪ್ ನೀಡಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net