ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗೆ ಯೋಜನೆ

workshop
ಸೊರಬದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ದೊರೆಯುವ ಸೌಲಭ್ಯ ಕುರಿತು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸುರೇಶ್ ಮಾತನಾಡಿದರು. ದೇವೇಂದ್ರ ನಾಯಕ್, ಎಂ.ಡಿ.ಉಮೇಶ್, ನಟರಾಜ್, ಲಕ್ಷ್ಮೀನಾರಾಯಣ, ಸರ್ವಜ್ಞಮೂರ್ತಿ, ಪದ್ಮಾವತಿ, ನೇತ್ರಾವತಿ ಇದ್ದರು.
Published on

ಸೊರಬ: ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುವ ಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ 18 ವಿಧದ ಸಾಲ ಸೌಲಭ್ಯ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಸುರೇಶ್ ತಿಳಿಸಿದರು.
ಬುಧವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಪುರಸಭೆ ಆಶ್ರಯದಲ್ಲಿ ಬೀದಿ ಬದಿ ವ್ಯಾಪಾರಿಗಳ ಸ್ವ ನಿಧಿ ಸಮೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡಲು ಪ್ರಧಾನಮಂತ್ರಿ ಜೀವನ್ ಜ್ಯೋತಿ, ಸುರಕ್ಷಾ ಬಿಮಾ, ಶ್ರಮಯೋಗಿ ಧನ ಯೋಜನೆ ಮೂಲಕ ಸಾಲ ಸೌಲಭ್ಯ ಯೋಜನೆ ಜಾರಿಗೆ ತರಲಾಗಿದೆ. ಪಾರಂಪರಿಕವಾಗಿ ವ್ಯಾಪಾರವನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ಇದು ಪೂರಕವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಡಿ.ಉಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದಿ ಬದಿಯಲ್ಲಿ ವ್ಯಾಪಾರವನ್ನು ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳ ಆರ್ಥಿಕ ನೆರವಿಗಾಗಿ ಸರ್ಕಾರ ಅನೇಕ ರೀತಿಯ ಸಾಲ ಸೌಲಭ್ಯದ ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಸದುಪಯೋಗಪಡಿಸಿಕೊಂಡು ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನೇತ್ರಾವತಿ ಮಾತನಾಡಿ, ಮಾತೃವಂದನಾ ಯೋಜನೆಯಡಿ ಲಾನುಭವಿಗಳಿಗೆ ಮೊದಲ ಹಂತದಲ್ಲಿ 5 ಸಾವಿರ ರೂ, ಎರಡನೇ ಹಂತದಲ್ಲಿ 6 ಸಾವಿರ ರೂ. ಸಹಾಯಧನ ಸೌಲಭ್ಯ ದೊರೆಯಲಿದೆ. ಬಾಲ್ಯ ವಿವಾಹಕ್ಕೆ ಪಾಲಕರು, ಪುರೋಹಿತರು ಹಾಗೂ ಸಾರ್ವಜನಿಕರು ಯಾರೇ ಪ್ರೇರಣೆ ನೀಡಿದರೂ ಕಾನೂನಿನ ಅಡಿಯಲ್ಲಿ ಅವರಿಗೆ ಶಿಕ್ಷೆ ಆಗಲಿದೆ. ಈ ರೀತಿಯ ಯಾವುದೇ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಮಾನ್ ಧನ್ ಯೋಜನೆ, ಆರೋಗ್ಯ ಇಲಾಖೆಯಲ್ಲಿ ಜನನಿ ಸುರಕ್ಷಾ ಯೋಜನೆ, ಆಹಾರ ಇಲಾಖೆಯಲ್ಲಿ ಒಂದು ರಾಷ್ಟ್ರ ಒಂದು ಕಾರ್ಡ್, ಕೆನರಾ ಬ್ಯಾಂಕ್‌ನಲ್ಲಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ ಜೀವನ್ ಜ್ಯೋತಿ ಬಿಮಾ ಯೋಜನೆ ಸೌಲಭ್ಯಗಳು ದೊರೆಯುವ ಬಗ್ಗೆ ಮಾಹಿತಿ ನೀಡಲಾಯಿತು.
ಹಾವೇರಿಯ ವರಕವಿ ಸರ್ವಜ್ಞ ಗ್ರಾಮೀಣ ನಗರ ಅಭಿವೃದ್ಧಿ ಸಂಸ್ಥೆಯಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮ ಅಭಿಯಾನದ ವ್ಯವಸ್ಥಾಪಕ ದೇವೇಂದ್ರ ನಾಯಕ್, ಪುರಸಭಾ ಸದಸ್ಯರಾದ ಎಂ.ಡಿ.ಉಮೇಶ್, ನಟರಾಜ್, ಆಪ್ರೀನ್, ಸುಲ್ತಾನ ಬೇಗಂ, ಲಕ್ಷ್ಮೀನಾರಾಯಣ, ಸರ್ವಜ್ಞಮೂರ್ತಿ, ಪದ್ಮಾವತಿ, ಸುಹಾಸ್, ಜಯಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net