ಬದಲಾವಣೆ ಕಾಣದ ಪರಿಶಿಷ್ಟರ ಬದುಕು: ಸಚಿವ ಮಹದೇವಪ್ಪ ಬೇಸರ | Warning to officers

S W meeting
Published on

ಬೆಂಗಳೂರು: ಸರ್ಕಾರ ಬಂದು ಎರಡು ವರ್ಷಗಳು ಕಳೆದರೂ ಸಹ ಪರಿಶಿಷ್ಟರ ಬದುಕಿನಲ್ಲಿ ಬದಲಾವಣೆಯಿಲ್ಲ. ಇದಕ್ಕಾಗಿ ಸರ್ಕಾರವೇ ರೂಪಿಸಿರುವ ಎಸ್‌ಸಿಎಸ್‌ಪಿ- ಟಿಎಸ್‌ಪಿ ಕಾಯ್ದೆಯ ಆಶಯಗಳಿಗೆ ಕೆಲವು ಇಲಾಖೆಗಳು ನಿರೀಕ್ಷಿತಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ಹೊರ ಹಾಕಿದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿಯಡಿ 2025-26ನೇ ಸಾಲಿನ ಕ್ರಿಯಾ ಯೋಜನೆಯ ಕುರಿತು ಬುಧವಾರ ಎಂಟು ತಾಸುಗಳ ಕಾಲ ಸಭೆ ನಡೆಸಿದ ಅವರು, ಆಶಯಕ್ಕೆ ಸ್ಪಂದಿಸದ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಅಂತಹವರ ವಿರುದ್ಧ ದಾವೆ ದಾಖಲಿಸಲು ಹಿಂದೇಟು ಹಾಕುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಬಹಳಷ್ಟು ದೂರದೃಷ್ಟಿ ಇಟ್ಟುಕೊಂಡು ಯೋಜನೆ ಜಾರಿಗೆ ತರಲಾಗಿದೆ. ಈ ದಿಸೆಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಕಾಯ್ದೆಯ ಆಶಯಗಳನ್ನು ಉಲ್ಲಂಘಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದರು.

ಕೃಷಿ, ನೀರಾವರಿ, ವಸತಿ, ಕೈಗಾರಿಕೆ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಂಧನ, ಸಾರಿಗೆ, ರೇಷ್ಮೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಮಾಜ ಕಲ್ಯಾಣ, ಉನ್ನತ ಶಿಕ್ಷಣ ಸೇರಿ 34 ಇಲಾಖೆಗಳಲ್ಲಿ ನಿಗದಿಗೊಳಿಸಿರುವ ಅನುದಾನದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ ಎಂದು ವಿವರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬಹು ಮುಖ್ಯವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಶಿಷ್ಟ ಸಮುದಾಯಗಳ ಅದರಲ್ಲೂ ಪರಿಶಿಷ್ಟ ಮಹಿಳೆಯರ ಬದುಕಲ್ಲಿ ಆಗಿರುವ ಗುಣಾತ್ಮಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಗಿರುವ ಬದಲಾವಣೆಯ ಕುರಿತಾಗಿ ನಿಖರವಾದ ಮಾಹಿತಿ ಒದಗಿಸಲು ತಾಕೀತು ಮಾಡಿದರು.

ಪ್ರತಿಲನ ಕಾಣುತ್ತಿಲ್ಲ

ಪರಿಶಿಷ್ಟ ಸಮುದಾಯದ ಏಳಿಗೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದರೂ ಸಹ ಪರಿಶಿಷ್ಟ ಸಮುದಾಯದ ಬದುಕಲ್ಲಿ ಅಂತಹ ಪ್ರತಿಫಲನ ಕಾಣಿಸುತ್ತಿಲ್ಲ. ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಪರಿಶಿಷ್ಟರಿಗೆ ನೀಡುವ ಸೌಲಭ್ಯದ ಕುರಿತ ನಿಖರ ದತ್ತಾಂಶವನ್ನು ಸಂಗ್ರಹಿಸಿ, ಆ ದತ್ತಾಂಶದ ಪ್ರತಿಯ ಮೇಲೆ ತಮ್ಮ ಸಹಿ ಹಾಕಿ, ಅದನ್ನು ಧೃಢೀಕರಿಸಬೇಕು ಎಂದು ತಿಳಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಕುರಿತಾಗಿ ಹೆಚ್ಚಿನ ಅರಿವು ಮೂಡಿಸುವ ಕೆಲಸ ಮಾಡಬೇಕು ಮತ್ತು ಅಧಿಕಾರಿಗಳೂ ಸಹ ದೇಶ ನಿರ್ಮಾಣದಲ್ಲಿ ಬಾಬಾ ಸಾಹೇಬರು ವಿವಿಧ ಕ್ಷೇತ್ರಗಳಲ್ಲಿ ಹೊಂದಿದ್ದ ಜ್ಞಾನದ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ಪರಿಶಿಷ್ಟರಿಗೆ ಮನೆಗಳನ್ನು ನಿರ್ಮಿಸಲು ತೊಡಗಿದ್ದು ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪರಿಶಿಷ್ಟರ ವಸತಿ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ನೀಡಬೇಕೆಂದು ಸಚಿವ ಮಹದೇವಪ್ಪ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net