ಬಿಡಿಎ ಸೈಟ್ ಕೊಡಿಸುವುದಾಗಿ ವಂಚನೆ

bda office
Published on

ಬೆಂಗಳೂರು: ಬಿಡಿಎಯಲ್ಲಿ ಸೈಟ್ ಕೊಡಿಸುವುದಾಗಿ ಆಮಿಷವೊಡ್ಡಿ 20 ಲಕ್ಷ ರೂ. ಪಡೆದು ನಕಲಿ ಮಂಜೂರಾತಿ ಪ್ರಮಾಣಪತ್ರ ನೀಡಿದ್ದ ಆರೋಪಿಗಳ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಡಿಎ ಜಾಗೃತ ದಳದ ಡಿವೈಎಸ್‌ಪಿ ಯು.ಡಿ. ಕೃಷ್ಣಕುಮಾರ್ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಆರೋಪಿಗಳಾದ ಶುಭಕರ್ ಅಲಿಯಾಸ್ ಮಂಜು, ಲೋಕೇಶ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿವಕುಮಾರ್ ಎಂಬುವರಿಗೆ ಆರೋಪಿಗಳಾದ ಶುಭಕರ್ ಮತ್ತು ಲೋಕೇಶ್ ಬಿಡಿಎಯಿಂದ ಸೈಟ್ ಕೊಡಿಸುವುದಾಗಿ ನಂಬಿಸಿ ಬ್ಯಾಂಕಿನ ಮೂಲಕ 6 ಲಕ್ಷ ರೂ. ಮತ್ತು 14 ಲಕ್ಷ ರೂ. ಪಡೆದುಕೊಂಡಿದ್ದರು. ಇದಾದ ಮೇಲೆ ಎಸ್‌ಎಂವಿ ನಗರ 2ನೇ ಹಂತದಲ್ಲಿ ಸೈಟ್ ನಂಬರ್ 10 ಅನ್ನು ಶಿವಕುಮಾರ್‌ಗೆ ಮಂಜೂರು ಆಗಿರುವಂತೆ ಬಿಡಿಎ ಉಪಕಾರ್ಯದರ್ಶಿ-3ರ ಹೆಸರಿನಲ್ಲಿ 2014ರ ೆ.6ರಂದು ಪ್ರಮಾಣಪತ್ರ ನೀಡಿದ್ದರು.

ಇದಾದ ಮೇಲೆ 2015ರ ಮಾರ್ಚ್ 9ಕ್ಕೆ ಎನ್‌ಒಸಿ ನೀಡಿರುವ ಹಾಗೆ ನಕಲಿ ಪತ್ರ ಸೃಷ್ಟಿಸಿಕೊಟ್ಟಿದ್ದರು. ಇದರಲ್ಲಿ ಬಿಡಿಎ ಲೆಟರ್ ಹೆಡ್ ಮತ್ತು ಉಪಕಾರ್ಯದರ್ಶಿ ಅವರ ಸೀಲು, ಸಹಿ ನಕಲಿ ಮಾಡಿ 2023ರ ಜೂನ್ 29ರಂದು ಶಿವಕುಮಾರ್‌ಗೆ ನೀಡಿದ್ದರು. ಅನುಮಾನ ಬಂದು ಬಿಡಿಎಗೆ ಬಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಿಡಿಎ ಹೆಸರು, ಲೆಟರ್ ಹೆಡ್, ಅಧಿಕಾರಿಗಳ ಸೀಲು, ಸಹಿ ನಕಲಿ ಮಾಡಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net