'ಕುಬೇರಾ' ಚಿತ್ರದಂತೆಯೇ ಕೋಟಿಗಟ್ಟಲೇ ಹಣ ಲೂಟಿ! ಕಳ್ಳರ ಹೆಡೆಮುರಿ ಕಟ್ಟಲು ಖಾಕಿ ಬಲೆ | Scam

ವಿಜಯವಾಣಿ (32)
Published on

Scam: ಇತ್ತೀಚೆಗಷ್ಟೇ ತೆರೆಕಂಡ ನಟ ಧನುಷ್ ಅಭಿನಯದ ತೆಲುಗು ಚಿತ್ರ 'ಕುಬೇರ' ಥಿಯೇಟರ್‌ನಿಂದ ಇದೀಗ ಒಟಿಟಿಗೆ ಬಂದಿಳಿದಿದೆ. ಈ ಸಿನಿಮಾದ ಕಥಾಹಂದರ ಮತ್ತು ಅದರಲ್ಲಿ ತೋರಿಸುವ ಕೆಲವು ದೃಶ್ಯಗಳು ನೋಡುಗರ ಗಮನ ಸೆಳೆದಿದೆ. ಚಿತ್ರದಲ್ಲಿ ಮೂಡಿಬಂದಿರುವ ಕ್ರಿಮಿನಲ್​ ಕಥೆಯಂತೆಯೇ ಇಲ್ಲೊಂದು ಘಟನೆ ಬೆಳಕಿಗೆ ಬಂದಿರುವುದು ಸದ್ಯ ಖಾಕಿ ಪಡೆಯನ್ನೇ ಬೆರಗಾಗಿಸಿದೆ.

ಕುಬೇರಾ ಚಿತ್ರದ ನಿರ್ದೇಶಕ ಶೇಖರ್ ಕಮ್ಮುಲ ಅವರು, ಮುಗ್ಧ ಜನರನ್ನು ಬಳಸಿಕೊಂಡು ವಂಚಕರು ಹೇಗೆ ಇಂತಹ ವಂಚನೆಗಳನ್ನು ಮಾಡುತ್ತಾರೆ, ಹೇಗೆಲ್ಲ ದ್ರೋಹ ಬಗೆಯುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಆದಾಗ್ಯೂ, ಈ ಚಿತ್ರದ ಕಥಾವಸ್ತುವಿನಂತೆಯೇ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಒಂದು ದೊಡ್ಡ ಹಗರಣ ತಡವಾಗಿ ಬೆಳಕಿಗೆ ಬಂದಿದೆ.

ವಂಚಕರು ನೆಲ್ಲೂರು ಆ್ಯಕ್ಸಿಸ್ ಬ್ಯಾಂಕ್‌ಗೆ 10 ಕೋಟಿ 60 ಲಕ್ಷ ರೂ. ವಂಚಿಸಿರುವುದು ಗೊತ್ತಾಗಿದೆ. ಇದಕ್ಕಾಗಿ ಅವರು ಅಮಾಯಕ ಬುಡಕಟ್ಟು ಜನಾಂಗದವರ ಗುರುತನ್ನು ಬಳಸಿಕೊಂಡು, ದರೋಡೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ನಕಲಿ ಕಂಪನಿಯನ್ನು ಸ್ಥಾಪಿಸಿ, ಅದರಲ್ಲಿ ಕೆಲವು ಬುಡಕಟ್ಟು ಜನಾಂಗದವರನ್ನು ಉದ್ಯೋಗಿಗಳೆಂದು ತೋರಿಸಲಾಗಿದೆ. ಆರು ತಿಂಗಳಿನಿಂದ ಸಂಬಳ ನೀಡಲಾಗಿದೆ ಎಂದು ಹೇಳಿಕೆಗಳನ್ನು ರಚಿಸಿದ್ದ ಕಿಡಿಗೇಡಿಗಳು, ನೆಲ್ಲೂರಿನ ಆ್ಯಕ್ಸಿಸ್ ಶಾಖೆಯಲ್ಲಿ ಒಟ್ಟು 56 ಮಂದಿಯ ಹೆಸರಿನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿ, ಹಣವನ್ನೂ ಪಡೆದಿದ್ದಾರೆ.

ಆದಾಗ್ಯೂ, ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದಕ್ಕಾಗಿ ಬುಡಕಟ್ಟು ಜನಾಂಗದವರಿಗೆ ಬ್ಯಾಂಕ್​ ನೋಟಿಸ್ ಕಳುಹಿಸಿತು. ಈ ಮೂಲಕ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಬೆನ್ನಲ್ಲೇ ಬ್ಯಾಂಕ್​ ಮ್ಯಾನೇಜರ್​, ಪೊಲೀಸ್​ ಠಾಣೆಗೆ ದೂರು ನೀಡಿದರು. ಅಸಲಿಗೆ ಈ ಬೃಹತ್ ಹಗರಣ 2022ರಿಂದ ಅಂದರೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ, ಬ್ರಾಂಚ್​ ಮ್ಯಾನೇಜರ್​ ಮುತ್ತುಕೂರು ಪೊಲೀಸ್ ಠಾಣೆಯಲ್ಲಿ ಮೂರು ಜನರ ವಿರುದ್ಧ ದೂರು ದಾಖಲಿಸಿದ್ದರು. ಈ ಬೃಹತ್ ಹಗರಣದಲ್ಲಿ ಬ್ಯಾಂಕ್ ನೌಕರರು ಕೂಡ ಪಾತ್ರ ವಹಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮತ್ತು ಆ ದಿಕ್ಕಿನಲ್ಲಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net