ಎಸ್‌ಸಿ ಸಮೀಕ್ಷೆ ಲೋಪದೋಷ ನಿವಾರಣೆಗೆ ಒತ್ತಾಯ | Hiring technician for a hobli is appropriate

SC delegation
Published on

ಬೆಂಗಳೂರು: ಪರಿಶಿಷ್ಟ ಜಾತಿ ಸಮೀಕ್ಷೆಯ ಬಗ್ಗೆ ಗಣತಿದಾರರಿಗೆ ಈ ಮೊದಲು ನೀಡಿದ ಮೂರು ತಾಸಿನ ತರಬೇತಿ ಸಾಲದಾಗಿದೆ. ಸಮೀಕ್ಷಾ ಲೋಪಗಳಿಗೆ ಪರಿಹಾರದ ಭಾಗವಾಗಿ ಗಣತಿದಾರರು, ಮೇಲ್ವಿಚಾರಕರಿಗೆ ಒಂದುದಿನದ ಸಮಗ್ರ ತರಬೇತಿ ನೀಡಲು ಪರಿಶಿಷ್ಟ ಜಾತಿ ಮುಖಂಡರು ಮೊರೆಯಿಟ್ಟಿದ್ದಾರೆ.

ಎಸ್‌ಸಿ ಮೀಸಲು ವರ್ಗೀಕರಣ ಕುರಿತು ವರದಿ ಸಲ್ಲಿಸಲು ನೇಮಕವಾದ ಏಕಸದಸ್ಯ ವಿಚಾರಣಾ ಆಯೋಗದ ಮುಖ್ಯಸ್ಥ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಅವರನ್ನು ಎಸ್‌ಸಿ ಮುಖಂಡರ ನಿಯೋಗ ಶನಿವಾರ ಭೇಟಿ ಮಾಡಿ, ಕ್ಷೇತ್ರ ಕಾರ್ಯದ ಕುಂದು-ಕೊರತೆಗಳನ್ನು ವಿವರಿಸಿತು.

ಒಳಮೀಸಲಾತಿ ಶೀಘ್ರ ಜಾರಿಗೊಳೀಸಬೇಕೆಂಬ ಸರ್ಕಾರದ ಕಾಳಜಿ, ಬದ್ಧತೆ ಸರಿಯಿದೆ. ಆದರೆ ಜಾತಿ ಸಮೀಕ್ಷೆ ಕಾರ್ಯಕ್ಕೆ ಗಣತಿದಾರರಿಗೆ ಕೇವಲ ಮೂರು ಗಂಟೆ ತರಬೇತಿ ನೀಡಿರುವುದು ಲೋಪಗಳಿಗೆ ಕಾರಣವಾಗಿದ್ದು, ಒಂದುದಿನದಮಟ್ಟಿಗೆ ಸಮಗ್ರ ತರಬೇತಿ ನೀಡುವುದರಿಂದ ಬಗೆಹರಿಸಬಹುದಾಗಿದೆ ಎಂದು ಕೋರಿದೆ.

ಟೆಕ್ನಿಷಿಯನ್ ನೇಮಕ

ನೆಟ್‌ವರ್ಕ್, ಸರ್ವರ್ ಸಮಸ್ಯೆ ಪರಿಹರಿಸಲು ಹೋಬಳಿಗೆ ಒಬ್ಬರಂತೆ ಟೆಕ್ನಿಷಿಯನ್ ನೇಮಕ ಮಾಡಬೇಕು. ಸಮುದಾಯದ ಜನರು ಶೈಕ್ಷಣಿಕವಾಗಿ ಹಿಂದುಳಿದಿರುವ ಕಾರಣ ಪ್ರಶ್ನಾವಳಿಗೆ ಮಾಹಿತಿ ನೀಡಲು ತಡವರಿಸುತ್ತಿದ್ದು, ಪ್ರಶ್ನೆಗಳನ್ನು ಸರಳಗೊಳಿಸಬೇಕು ಎಂದು ವಿನಂತಿಸಿದೆ.

ಪರಿಶಿಷ್ಟ ಜಾತಿಯಲ್ಲಿರುವ ಬೇಡಜಂಗಮ, ಬುಡ್ಗಜಂಗಮ ಹೆಸರಿನಲ್ಲಿರುವ ಲಿಂಗಾಯತ ಸಮಾಜದ ಗುರುಸ್ಥಾನದಲ್ಲಿರುವ ವೀರಶೈವರು, ಬೇಡಜಂಗಮವೆಂದು ನೋಂದಾಯಿಸಿಕೊಳ್ಳುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ.

ನಕಾರಕ್ಕೆ ಆಕ್ಷೇಪ

ಪಡಿತರ ಚೀಟಿಗಳ್ಲಿ ಸೊಸೆ ಮತ್ತು ಮಕ್ಕಳ ಹೆಸರು ಇಲ್ಲವೆಂದು ನೋಂದಣಿ ಮಾಡಿಕೊಳ್ಳುತ್ತಿಲ್ಲ. ಇದು ತಪ್ಪು ನಡೆಯಾಗಿದೆ ಎಂದು ನಿಯೋಗ ಆಕ್ಷೇಪಿಸಿದ್ದು, ಹೊಸದಾಗಿ ಮದುವೆಯಾಗಿ ಬಂದ ಸೊಸೆ, ಆಗತಾನೇ ಹುಟ್ಟಿದ ಮಕ್ಕಳ ಮಾಹಿತಿ ದಾಖಲಿಸಿಕೊಳ್ಳಲು ಯಾವುದೇ ದಾಖಲೆಗಳನ್ನು ಕೇಳಬಾರದು ಎಂಬ ಸೂಚನೆ ನೀಡಲು ವಿನಂತಿಸಿದೆ.

ಬಹಳಷ್ಟು ಗಣತಿದಾರರಲ್ಲಿ ಉತ್ತಮ ಗುಣಮಟ್ಟದ ಮೊಬೈಲ್‌ಗಳು ಇಲ್ಲದ ಕಾರಣ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಸಮೀಕ್ಷೆ ನಡೆಸಲು ತೊಂದರೆಯಾಗುತ್ತದೆ. ಜಾತಿ ಸಮೀಕ್ಷೆ ಪಾರದರ್ಶಕ, ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಈ ಸಮಸ್ಯೆ ಹೋಗಲಾಡಿಸಬೇಕು ಎಂದು ಕೋರಿದರು.

ಗಣತಿ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿಗೆ ಅಗತ್ಯ ಪರಿಕರ, ಉರಿಬಿಸಿಲಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿರುವ ಕಾರಣ, ಟೋಪಿ ವ್ಯವಸ್ಥೆ, ಸಕಾಲಕ್ಕೆ ಗೌರವಧನ ಪಾವತಿಸಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿತು.

ಕ್ರಮದ ಭರವಸೆ

ಮದ ಭರವಸೆನಿಯೋಗದ ಜತೆಗೆ ಚರ್ಚಿಸಿ ಅಹವಾಲು ಆಲಿಸಿದ ನ್ಯಾ.ನಾಗಮೋಹನ್‌ದಾಸ್ ಅವರು ಈಗಾಗಲೇ ನಮಗೆ ತಲುಪಿರುವ ದೂರುಗಳು, ಸಂಶಯಗಳನ್ನು ಅವಲೋಕಿಸಿ ಎಲ್ಲ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂಬ ಭರವಸೆ ನೀಡಿದರು.

ಈ ನಿಯೋಗದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಮುಖಂಡರಾದ ಡಿ.ಜಿ.ಸಾಗರ್, ಮುತ್ತುರಾಜ್, ಅಮರನಾಥ್ ಮಳವಳ್ಳಿ, ದಾಸಯ್ಯ ಇನ್ನಿತರ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net