ಹಿಂಡೆನ್​ಬರ್ಗ್ ವಿವಾದ ತೀರ್ಪು ಕಾಯ್ದಿರಿಸಿದ ಸುಪ್ರೀಂ; ಸೆಬಿ, ತಜ್ಞರ ಸಮಿತಿ ಮೇಲಿನ ಆರೋಪಕ್ಕೆ ಸಿಜೆಐ ಅಸಮ್ಮತಿ

Adani
Published on

ಷೇರು ಮಾರುಕಟ್ಟೆ ನಿಯಮಗಳನ್ನು ಅದಾನಿ ಸಮೂಹ ಉಲ್ಲಂಘಿಸಿದೆ ಎಂದು ಹಿಂಡೆನ್​ಬರ್ಗ್ ಸಂಸ್ಥೆ ಆರೋಪಿಸಿದ್ದ ಪ್ರಕರಣದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಪೂರ್ಣಗೊಳಿಸಿ, ತೀರ್ಪನ್ನು ಕಾದಿರಿಸಿದೆ.

ಶಾರ್ಟ್​ಸೆಲ್ಲಿಂಗ್​ನಂತಹ ಪ್ರಕ್ರಿಯೆಗಳಿಂದ ಷೇರು ಮಾರುಕಟ್ಟೆಯಲ್ಲಿ ಉಂಟಾಗುವ ಚಂಚಲತೆಯಿಂದ ಕಾಪಾಡಲು ಸೆಬಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಚಾರಣೆ ವೇಳೆ ತಿಳಿಸಿದ ಸಿಜೆಐ, ಈ ವಿಷಯದಲ್ಲಿ ನಿಯಂತ್ರಕ ಚೌಕಟ್ಟನ್ನು ಹಾಕಿಕೊಳ್ಳಲಾಗಿದೆಯೇ ಎಂಬುದನ್ನು

ಪರಿಶೀಲಿಸಲು ಕಳೆದ ಮಾರ್ಚ್​ನಲ್ಲಿ ನ್ಯಾಯಾಲಯ ರಚಿಸಿದ್ದ ತಜ್ಞರ ಸಮಿತಿಯ ಸದಸ್ಯರ ನಿಷ್ಪಕ್ಷಪಾತ ನಿಲುವುಗಳ ಬಗ್ಗೆ ಅರ್ಜಿದಾರರ ಆಕ್ಷೇಪಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಅದೇ ರೀತಿ, ಸೆಬಿ (ಸೆಕ್ಯುರಿಟೀಸ್ ಆಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ) ನಡೆಸುತ್ತಿರುವ ತನಿಖೆಯ ವಿರುದ್ಧವೂ ಅರ್ಜಿದಾರರು ಎತ್ತಿದ ಪ್ರಶ್ನೆಗಳು ಸಿಜೆಐ ಅವರನ್ನು ಹೆಚ್ಚು ಪ್ರಭಾವಿಸಲಿಲ್ಲ. ಸೆಬಿ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಸ್ಟಾಕ್ ಮಾರ್ಕೆಟ್​ನ ಶಂಕಿತ ಅಕ್ರಮದ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಹೊಂದಿದೆ. ಯಾವುದೇ ಸೂಕ್ತ ದಾಖಲೆಯಿಲ್ಲದೆ ಸೆಬಿ ತನಿಖಾ ವೈಖರಿಯನ್ನು ನ್ಯಾಯಾಲಯ ಪ್ರಶ್ನಿಸಿ, ಪ್ರತ್ಯೇಕ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸುವುದು ಸರಿಯೇ ಎಂದು ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಸಿಜೆಐ ಪ್ರಶ್ನಿಸಿದ್ದಾರೆ.

ಸೆಬಿ ಪರ ವಾದ ಮಂಡಿಸಿದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಂಕಿತ ವಹಿವಾಟಿನ 24 ಪ್ರಕರಣಗಳ ಪೈಕಿ 22 ಪ್ರಕರಣಗಳ ತನಿಖೆ ಮುಗಿದಿದೆ. ಉಳಿದ 2 ಪ್ರಕರಣಗಳಿಗೆ ವಿದೇಶಿ ನಿಯಂತ್ರಕಗಳಿಂದ ಮಾಹಿತಿ ಅಗತ್ಯವಿದೆ. ಎಷ್ಟು ಅವಧಿಯೊಳಗೆ ಮಾಹಿತಿ ಲಭ್ಯವಾಗಲಿದೆ ಎಂಬ ಬಗ್ಗೆ ಖಚಿತತೆ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಮಾರುಕಟ್ಟೆಯಲ್ಲಿ ಈ ರೀತಿಯ ಚಂಚಲತೆ ತಪ್ಪಿಸಲು ಸೆಬಿ ಏನು ಮಾಡಬೇಕೆಂದು ಯೋಚಿಸಿದೆ? ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ನಿಮ್ಮ ಕ್ರಮಗಳೇನು? ಎಂಬ ಸಿಜೆಐ ಪ್ರಶ್ನೆಗೆ ಉತ್ತರಿಸಿದ ಮೆಹ್ತಾ, ಈ ವಿಷಯಗಳು ಸೆಬಿ ಪರಿಗಣನೆಯಲ್ಲಿವೆ. ನಿಯಂತ್ರಕ ಚೌಕಟ್ಟನ್ನು ಸುಧಾರಿಸುವ ಕುರಿತು ನ್ಯಾಯಾಲಯ ರಚಿಸಿರುವ ತಜ್ಞರ ಸಮಿತಿ ನೀಡಿದ ಸಲಹೆಗಳಿಗೆ ಸೆಬಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವಿವರಿಸಿದರು.

ಅರ್ಜಿದಾರರಲ್ಲಿ ಒಬ್ಬರಾದ ಅನಾಮಿಕಾ ಜೈಸ್ವಾಲ್ ಪರ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಹಿಂಡೆನ್​ಬರ್ಗ್ ವರದಿ ವಾಸ್ತವ ಎಂದು ಹೇಳಿದ್ದಕ್ಕೆ, ಆ ವರದಿಯೇ ನಿಜವೆಂದು ಭಾವಿಸಿ, ತನಿಖೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದ ಸಿಜೆಐ, ಈ ವರದಿ ಸರಿಯಾಗಿದೆ ಎಂದು ಒಪ್ಪಿಕೊಳ್ಳಬೇಕಾಗಿಲ್ಲ. ಈ ಬಗ್ಗೆ ತನಿಖೆ ನಡೆಸುವಂತೆ ನಾವು ಸೆಬಿಗೆ ಸೂಚಿಸಿದ್ದೇವೆ ಎಂದರು. 2014ರಿಂದಲೇ ಅದಾನಿ ಸಮೂಹದ ಉಲ್ಲಂಘನೆಗಳ ಬಗ್ಗೆ ಆರೋಪಗಳಿದ್ದರೂ, ಸೆಬಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ, ಸೆಬಿ ಪಾತ್ರ ಸಂಶಯಾಸ್ಪದವಾಗಿದೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದರು.

ಸಿಜೆಐ ಚಂದ್ರಚೂಡ್ ಹೇಳಿದ್ದೇನು?

  • ಹಿಂಡೆನ್​ಬರ್ಗ್ ವರದಿಯಲ್ಲಿ ಇರುವುದೆಲ್ಲವೂ ಸತ್ಯ ಎಂದು ನಾವು ನೇರವಾಗಿ ಒಪ್ಪಿಕೊಳ್ಳಬೇಕಾಗಿಲ್ಲ. ಇದನ್ನು ತನಿಖೆ ಮಾಡಿ ಎಂದು ಸೆಬಿಗೆ ಹೇಳಿದ್ದೇವೆ
  • ಪ್ರಶಾಂತ್ ಭೂಷಣ್ ಅವರೇ, ಆರೋಪಗಳನ್ನು ಮಾಡುವುದು ತುಂಬಾ ಸುಲಭ. ನೀವು ನ್ಯಾಯಸಮ್ಮತತೆಯ ಮೂಲಭೂತ ತತ್ವಗಳ ಬಗ್ಗೆಯೂ ಯೋಚಿಸಬೇಕು.
  • ವಕೀಲರು ವಿವಿಧ ಪ್ರಕರಣಗಳಲ್ಲಿ ವಕೀಲರಾಗಿ ಕೆಲಸ ಮಾಡುತ್ತಾರೆ. ತಜ್ಞರ ಸಮಿತಿಯಲ್ಲಿರುವ ಸದಸ್ಯರೊಬ್ಬರು 17 ವರ್ಷಗಳ ಹಿಂದೆ ಅದಾನಿ ಸಮೂಹದ ಪರ ಕೋರ್ಟ್​ನಲ್ಲಿ ವಾದಿಸಿದ್ದನ್ನು ನೀವು ಉಲ್ಲೇಖಿಸುತ್ತೀರಿ! ಆರೋಪ ಮಾಡುವಾಗ ಸ್ವಲ್ಪ ಜವಾಬ್ದಾರಿ ಇರಬೇಕು.
  • ವಾದಿಸಿದ ಮಾತ್ರಕ್ಕೆ ಅವರು ತಜ್ಞರ ಸಮಿತಿಯಲ್ಲಿರಲು ಅನರ್ಹರೇ?
  • ಈ ಆಧಾರ ರಹಿತ ಆರೋಪಗಳನ್ನು ನಾವೇಕೆ ಒಪ್ಪಬೇಕು? ನಿಮ್ಮ ತರ್ಕವನ್ನೇ ಒಪ್ಪುವುದಾದರೆ ಆರೋಪಿಗಳ ಪರ ಹಾಜರಾದ ಯಾವುದೇ ವಕೀಲರು ಹೈಕೋರ್ಟ್ ನ್ಯಾಯಾಧೀಶರಾಗಬಾರದು! ಅಲ್ಲವೇ?
  • 2006ರಲ್ಲಿ ವಕೀಲರಾಗಿ ವಾದಿಸಿದ್ದರು ಎಂಬುದನ್ನು ಉಲ್ಲೇಖಿಸಿ 2023ರಲ್ಲಿ ತಕರಾರು ತೆಗೆಯುವುದು ಸರಿಯೇ?

ಅರ್ಜಿದಾರರ ಆಕ್ಷೇಪಕ್ಕೆ ವಿರೋಧ: ಪ್ರಕರಣದ ವಿಚಾರಣೆಯ ವೇಳೆ, ತಜ್ಞರ ಸಮಿತಿಯ ಸದಸ್ಯರ ಬಗ್ಗೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸಿಜೆಐ ಚಂದ್ರಚೂಡ್ ಖಂಡಿಸಿದರು. ಈ ಆರೋಪಗಳು ನ್ಯಾಯಸಮ್ಮತವಲ್ಲ, ಆರೋಪ ಮಾಡುವಾಗ ಜವಾಬ್ದಾರಿ ಇರಬೇಕು ಎಂದು ಕಿವಿಮಾತು ಹೇಳಿದರು. ಸುಪ್ರೀಂಕೋರ್ಟ್ ರಚಿಸಿದ ಸಮಿತಿಯಲ್ಲಿ ಒ.ಪಿ. ಭಟ್, ಬಾಂಬೆ ಹೈಕೋರ್ಟ್​ನ

ನಿವೃತ್ತ ನ್ಯಾ. ಜೆಪಿ ದೇವಧರ್, ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರಿದ್ದು, ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಅಭಯ್ ಮನೋಹರ್ ಸಪ್ರೆ ಅಧ್ಯಕ್ಷರಾಗಿದ್ದಾರೆ. ಭಟ್ ಅವರು ಅದಾನಿ ಗ್ರೂಪ್ ಜತೆ ನಿಕಟ ಸಂಪರ್ಕ ಹೊಂದಿರುವ ಗ್ರೀಂಕೋ ಗ್ರೂಪ್​ನ ಮಾಜಿ ಛೇರ್ಮನ್ ಆಗಿದ್ದರು. ಸೋಮಶೇಖರ್ ಸುಂದರೇಶನ್ ಅದಾನಿ ಗ್ರೂಪ್ ಪರ ಈ ಹಿಂದೆ ವಾದ ಮಂಡಿಸಿದ್ದರು ಎಂದು ಪ್ರಶಾಂತ್ ಭೂಷಣ್ ಆಕ್ಷೇಪಿಸಿದ್ದರು. ಈ ಬಗ್ಗೆ ಸಿಜೆಐ ತೀವ್ರ ಅಸಮಾಧಾನ ಹೊರಹಾಕಿದರು.

ಮೊಯಿತ್ರಾಗೆ ಮತ್ತಷ್ಟು ಸಂಕಷ್ಟ?: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ಪಾರ್ಲಿಮೆಂಟ್ ಲಾಗಿನ್ ಐಡಿಯನ್ನು ಕೇವಲ ದುಬೈನಿಂದ ಮಾತ್ರವಲ್ಲ, ಅಮೆರಿಕದಿಂದಲೂ ಬಳಸಲಾಗಿದೆ ಎಂದು ಕೇಂದ್ರ ಐಟಿ ಇಲಾಖೆ ಮೂಲಗಳಿಂದ ತಿಳಿದುಬಂದಿದೆ. ನ್ಯೂಜೆರ್ಸಿ ಮತ್ತು ಬೆಂಗಳೂರಿನಲ್ಲಿ ಮೊಯಿತ್ರಾ ಲಾಗಿನ್ ಐಡಿ ಬಳಸಿ ಅವರ ಖಾತೆ ಪ್ರವೇಶಿಸಲಾಗಿದೆ. ಅಲ್ಲಿ ಖಾತೆ ಬಳಕೆಯಾಗುತ್ತಿದ್ದಾಗ ಮೊಯಿತ್ರಾ ಕೊಲ್ಕತ್ತಾ ಮತ್ತು ದೆಹಲಿಯಲ್ಲಿದ್ದರು ಎನ್ನಲಾಗಿದೆ. ಮೊಯಿತ್ರಾ ಅವರಿಗೆ ಈ ಬೆಳವಣಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡುವ ಸಾಧ್ಯತೆಯಿದೆ. ಸಂಸತ್ತಿನಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ ನಂತರ ಲೋಕಸಭೆಯ ಎಥಿಕ್ಸ್ ಸಮಿತಿ ಕೂಡ ಮೊಯಿತ್ರಾ ಅವರನ್ನು ಕರೆಸಿ ವಿಚಾರಣೆ ನಡೆಸಿದೆ. ಲಾಗಿನ್ ಐಡಿ ಹಂಚಿಕೊಂಡ ಕಾರಣಕ್ಕಾಗಿ ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸುವ ಸಾಧ್ಯತೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಮೊಯಿತ್ರಾ ಕೇವಲ ಹಿರಾನಂದಾನಿಗೆ ಲಾಗಿನ್ ಐಡಿಗಳನ್ನು ಒದಗಿಸಿದ್ದಲ್ಲ. ದೆಹಲಿ, ಬೆಂಗಳೂರು ಮತ್ತು ಸ್ಯಾನ್​ಫ್ರಾನ್ಸಿಸ್ಕೋದ ಅನೇಕ ಸ್ಥಳಗಳಿಂದ ಲಾಗ್ ಇನ್ ಆಗಿದೆ. ಇದೊಂದು ದೊಡ್ಡ ಪಿತೂರಿ ಎಂದು ದೂರುದಾರ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net