

ಬೆಳಗಾವಿ: ಉದ್ಯೋಗ ಹಾಗೂ ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಳ ಅನುಷ್ಠಾನದತ್ತ ಸರ್ಕಾರ ಮಹತ್ತರ ಹೆಜ್ಜೆಯೊಂದನ್ನು ಕ್ರಮಿಸಿದೆ. ಮಹತ್ವದ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ ದೊರಕಿದೆ.
ಸೋಮವಾರ ನಡೆದ ಕಲಾಪದಲ್ಲಿ ಸರ್ಕಾರದ ಪ್ರಸ್ತಾಪಕ್ಕೆ ಮೂರೂ ಪಕ್ಷದ ಸದಸ್ಯರು ಒಕ್ಕೊರಲ ಸಹಮತಿ ವ್ಯಕ್ತಪಡಿಸಿದ್ದಾರೆ. ಮುಂದಿನ ಹಂತದಲ್ಲಿ ಈ ಮಸೂದೆ ವಿಧಾನಪರಿಷತ್ನಲ್ಲಿ ಮಂಡನೆಯಾಗಿ ಪರ್ಯಾಲೋಚನೆ ನಡೆದು ಒಪ್ಪಿಗೆ ಪಡೆದ ಬಳಿಕ ರಾಜ್ಯಪಾಲರ ಅಂಕಿತ ಪಡೆದು ಜಾರಿಗೆ ಬರಲಿದೆ.
ಸದನದಲ್ಲಿ ನಿಯಮ 69ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕರು ಮೀಸಲು ಹೆಚ್ಚಳದ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಶೇ.50 ಮಿತಿ ದಾಟುವುದರಿಂದ ಯಾವ ರೀತಿ ಅನುಷ್ಠಾನವಾಗಲಿದೆ? ಸಂವಿಧಾನದ ತಿದ್ದುಪಡಿ ಅಗತ್ಯವಿರುವುದರಿಂದ ಅದಕ್ಕೆ ಕೇಂದ್ರವನ್ನು ಒಪ್ಪಿಸಲು ಸಾಧ್ಯವೇ? ಎಂಬ ಅನುಮಾನ ಬಗೆಹರಿಸಿಕೊಳ್ಳಲು ಯತ್ನಿಸಿದರು. ಸರ್ಕಾರ ಮಾತ್ರ ಆಶಾಭಾವನೆ ವ್ಯಕ್ತಪಡಿಸಿ, ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿತು. ಬಳಿಕ ಚರ್ಚೆಯಾದ ವಿಷಯದ್ದೇ ಮಸೂದೆಯಾಗಿದ್ದರಿಂದ ಪರ್ಯಾಲೋಚನೆ ಪ್ರಕ್ರಿಯೆ ಚುಟುಕಾಗಿ ನಡೆದು ಏಕಕಂಠದಲ್ಲಿ ಒಪ್ಪಿಗೆ ಸೂಚನೆಯಾಯಿತು.
ಮೀಸಲಾತಿ ಹೆಚ್ಚಳ ವಿಚಾರವಾಗಿ ಮೂರೂ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಕೂಡ ನಡೆಯಿತು. ಈ ವಿಧೇಯಕಕ್ಕೆ ವಿರೋಧ ಇಲ್ಲ ಎಂದು ಪದೇಪದೆ ಒತ್ತಿ ಹೇಳುವ ಪ್ರಯತ್ನ ಮಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ಯಾವತ್ತೂ ಮೀಸಲು ವಿರೋಧಿ. ಈಗ ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರಲು ಮೀಸಲು ಹೆಚ್ಚಳದ ಪ್ರಯತ್ನ ಮಾಡಲಾಗುತ್ತಿದೆ ಎಂದು ವಾದಿಸಿದರು. ಅಂತೆಯೇ, ಆಡಳಿತ ಪಕ್ಷ ತನ್ನ ನಿಲುವನ್ನು ಮಂಡಿಸಿತು. ಈ ವೇಳೆ ಮಾತಿನ ಮಲ್ಲಯುದ್ಧವೇ ನಡೆಯಿತು. ಜೆಡಿಎಸ್ ಕೂಡ ಹಿಂದೆ ಬೀಳಲಿಲ್ಲ. ಅಂಬೇಡ್ಕರ್, ಆರ್ಎಸ್ಎಸ್ ವಿಷಯ ಮುಂದಿಟ್ಟು ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಟೀಕೆಗಿಳಿದವು. ಚರ್ಚೆಯ ಕೊನೆಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಎಸ್ಟಿ-ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುತ್ತೇವೆ ಎಂದು ಚುನಾವಣೆ ವೇಳೆ ನಾವು ಕಮಿಟ್ ಆಗಿದ್ದು ನಿಜ ಎಂದರು. ಹಾಗಾಗಿಯೇ ಒತ್ತಡಗಳಾಗಿರುವುದು ನಿಜ. ಈಗ ಅದನ್ನು ಕಾರ್ಯಸಾಧುವನ್ನಾಗಿಸಲು ಹೊರಟಿದ್ದೇವೆ, ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.
ಮೀಸಲಾತಿ ಭಿಕ್ಷೆಯಲ್ಲ: ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಕ್ಕೆ, ದಲಿತರಿಗೆ ಮೀಸಲಾತಿ ಕೊಡುವುದು ಭಿಕ್ಷೆಯಲ್ಲ, ಅದು ಸಂವಿಧಾನದ ಹಕ್ಕು, ಮಾನವ ಹಕ್ಕು ಆಗಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಸಂವಿಧಾನದ ಪರಿಚ್ಛೇದ 15 ಮತ್ತು 16ರಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಹೇಳಿದ್ದಾರೆ. ಎಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಅವರು ಹೇಳಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಮೀಸಲಾತಿ ಕಲ್ಪಿಸಿರುವುದರಿಂದ ಶೇ.50 ಇದ್ದ ಮೀಸಲಾತಿ ಪ್ರಮಾಣ ಶೇ.56 ಆಗಿದೆ. ಇದು 1992ರಲ್ಲಿ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿರುವ ತೀರ್ಪಿನ ವಿರುದ್ಧವಾಗಿದೆ ಎಂದರು. 2011ರ ಜನಗಣತಿ ಪ್ರಕಾರ ಎಸ್ಸಿ ಸಮುದಾಯ ಶೇ.17.15, ಶೇ.6.95 ಸೇರಿ ಶೇ.24.1ರಷ್ಟಾಗಿದೆ. ಇದರ ಅನ್ವಯ 2017-18ರಲ್ಲಿ ಬಜೆಟ್ನಲ್ಲಿ ಎಸ್ಸಿಪಿ/ಟಿಎಸ್ಪಿ 30 ಸಾವಿರ ಕೋಟಿ ರೂ. ಅನುದಾನವನ್ನು ನೀಡಿದ್ದೇವು. ಆದರೆ, ತಾವು ಈಗ ಕೇವಲ 28 ಸಾವಿರ ಕೋಟಿ ರೂ. ಅನುದಾನ ನೀಡಿದ್ದೀರಿ ಎಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ, ಸರ್ಕಾರದ ಬಜೆಟ್ನ ಸಾಲ ಹಾಗೂ ಮರುಪಾವತಿ ಹಾಗೂ ಅಭಿವೃದ್ಧಿ ಅನುದಾನ ನೋಡಿಕೊಂಡು ಹಣ ಒದಗಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿಲ್ಲ. ಮಿಸಲಾತಿ ಹೆಚ್ಚಳ ಊರ್ಜಿತವಾಗಬೇಕಾದರೆ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಆಗಬೇಕು. ಸರ್ಕಾರ ಕಾನೂನು ತಂದ ಕೂಡಲೇ ಇದು ಸಂವಿಧಾನಬದ್ಧವಾಗುವುದಿಲ್ಲ. ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಿ. | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಈ ವಿಷಯದಲ್ಲಿ ನಿರ್ಣಯ ಮಾಡಬೇಕು. ಮಸೂದೆಯನ್ನು ಪ್ರಧಾನಿ ಕೈಗೆ ನೇರವಾಗಿ ಕೊಡಬೇಕು. ಆಗ ಅನುಷ್ಠಾನವಾಗಲಿದೆ. ಇಲ್ಲವಾದರೆ 4-6 ತಿಂಗಳು ತಡವಾಗುತ್ತದೆ. ಹಾಗೆಯೇ ಹೊರಗುತ್ತಿಗೆ ನೇಮಕ ಮಾಡುವಾಗ ಈ ಕಾನೂನು ಅನ್ವಯವಾಗುವಂತೆ ಮಾಡಬೇಕು. | ಎಚ್.ಕೆ. ಪಾಟೀಲ್ ಮಾಜಿ ಸಚಿವ