

ನವದೆಹಲಿ: ಬಾಬರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ನೀಡಿ, ಬಿಜೆಪಿಯ ಹಿರಿಯ ನೇತಾರರಾದ ಎಲ್.ಕೆ.ಆಡ್ವಾಣಿ, ಎಂ.ಎಂ.ಜೋಷಿ, ಉಮಾಭಾರತಿ ಸೇರಿ 32 ಆರೋಪಿಗಳನ್ನು ದೋಷಮುಕ್ತಗೊಳಿಸಿದ ಮಾಜಿ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ನವೀನ್ ಸಿನ್ಹಾ, ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ನ್ಯಾಯಾಧೀಶ ಯಾದವ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಮತ್ತು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅವಲೋಕಿಸಿ ಈ ತೀರ್ಮಾನ ತೆಗೆದುಕೊಂಡಿದೆ. ನ್ಯಾಯಾಧೀಶ ಯಾದವ್ ಅವರ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ನ್ಯಾಯಪೀಠ ಈ ಅವಲೋಕನ ನಡೆಸಿತ್ತು.
ಇದನ್ನೂ ಓದಿ: ‘ಈ ಬಾರಿ ಸಿಎಂ ನಿತೀಶ್ ಕುಮಾರ್ ಬೀಳ್ಕೊಡುಗೆ ನಿಶ್ಚಿತ…’
ಸೆಪ್ಟೆಂಬರ್ 30ರಂದು ನ್ಯಾಯಾಧೀಶರು ತೀರ್ಪು ನೀಡಿದ್ದರು. ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿದ್ದ 16ನೇ ಶತಮಾನದ್ದು ಎಂದು ಹೇಳಲಾದ ಬಾಬರಿ ಕಟ್ಟಡವನ್ನು ಕರ ಸೇವಕರು 1992ರ ಡಿಸೆಂಬರ್ 6ರಂದು ಧ್ವಂಸ ಮಾಡಿದ್ದರು. ಅಯೋಧ್ಯೆಯ 2.77 ಎಕರೆ ಜಮೀನಿಗೆ ಸಂಬಂಧಿಸಿದ ವಿವಾದವನ್ನು ಪಂಚ ಸದಸ್ಯರ ಸಾಂವಿಧಾನಿಕ ಪೀಠ ಇತ್ಯರ್ಥಗೊಳಿಸಿದ್ದು, ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಜಮೀನು ಬೇರೆಡೆ ಒದಗಿಸುವಂತೆ ತೀರ್ಪು ನೀಡಿತ್ತು. (ಏಜೆನ್ಸೀಸ್)