ನಕಲಿ ನೋಟುಗಳನ್ನು ಇಟ್ಟುಕೊಂಡಿದ್ದ ತರಕಾರಿ ಮಾರಾಟಗಾರನಿಗೆ ಶಿಕ್ಷೆ ಕಡಿಮೆ ಮಾಡಿದ ಸುಪ್ರೀಂಕೋರ್ಟ್, ತಕ್ಷಣ ಬಿಡುಗಡೆಗೆ ಆದೇಶ

Supreme Court
Published on

ತಮಿಳುನಾಡು: ತರಕಾರಿ ಮಾರಾಟಗಾರನಿಗೆ ನಲವತ್ಮೂರು 10 ರೂ.ಮುಖಬೆಲೆಯ ನಕಲಿ ನೋಟುಗಳನ್ನು ಇಟ್ಟುಕೊಂಡಿದ್ದಕ್ಕೆ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ತರಕಾರಿ ಮಾರಾಟಗಾರನ ಜೈಲು ಶಿಕ್ಷೆಯನ್ನು ಕಡಿಮೆ ಮಾಡಿದೆ. ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು ತಮಿಳುನಾಡಿನ ಥೇಣಿ ಜಿಲ್ಲೆಯ ನಿವಾಸಿ, ತರಕಾರಿ ಮಾರಾಟಗಾರ ಪಳನಿಸಾಮಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ.

ಪಳನಿಸಾಮಿ ವಿರುದ್ಧ ಐಪಿಸಿ ಸೆಕ್ಷನ್ 489 ಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆತನ ಬಳಿ 10 ರೂಪಾಯಿ ಮುಖಬೆಲೆಯ 43 ನಕಲಿ ನೋಟುಗಳು ಪತ್ತೆಯಾಗಿದ್ದವು. ಈತ ತರಕಾರಿ ಮಾರಾಟ ಮಾಡುತ್ತಿದ್ದ. ಪ್ರಮುಖ ಆರೋಪಿ ಕಬೀರ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 489 C ನಕಲಿ ಅಥವಾ ನಕಲಿಕರೆನ್ಸಿ-ನೋಟುಗಳು ಅಥವಾ ಬ್ಯಾಂಕ್-ನೋಟುಗಳನ್ನು ಹೊಂದಿರುವ ಅಪರಾಧಕ್ಕೆ ಸಂಬಂಧಿಸಿದೆ.

ಪಳನಿಸಾಮಿ ಅವರನ್ನು ಜನವರಿ 8, 2014 ರಂದು ವಿಚಾರಣಾ ನ್ಯಾಯಾಲಯವು ತಪ್ಪಿತಸ್ಥನೆಂದು ಘೋಷಿಸಿ, ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಅಕ್ಟೋಬರ್ 24, 2019 ರಲ್ಲಿ, ಮದ್ರಾಸ್ ಹೈಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಐದು ವರ್ಷಕ್ಕೆ ಇಳಿಸಿತು. ಅವರು 451 ದಿನಗಳ ಕಾಲ ಜೈಲಿನಲ್ಲಿದ್ದರು. ಪ್ರಕರಣದ ಮೂವರು ಆರೋಪಿಗಳಲ್ಲಿ ಪಳನಿಸಾಮಿಯೂ ಒಬ್ಬರು. ಇಬ್ಬರು ಆರೋಪಿಗಳ ವಿರುದ್ಧ ಸೆಕ್ಷನ್ 489 ಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಪಳನಿಸಾಮಿ 451 ದಿನಗಳ ಕಾಲ ಜೈಲುವಾಸವನ್ನು ಅನುಭವಿಸಿದ್ದು, ಅನಕ್ಷರಸ್ಥ ವ್ಯಕ್ತಿಯಾಗಿದ್ದಾರೆ. ತರಕಾರಿ ಮಾರಾಟಗಾರರಾಗಿ ಜೀವನ ಮಾಡುತ್ತಿದ್ದಾರೆ ಎಂದು ಪಳನಿಸಾಮಿ ಅವರ ವಕೀಲರು ಪೀಠಕ್ಕೆ ತಿಳಿಸಿದರು. ಮೂರನೆಯವನು ತಲೆಮರೆಸಿಕೊಂಡಿದ್ದಾನೆ. ಪಳನಿಸಾಮಿಗೆ ಈ ಹಿಂದೆ ಯಾವುದೇ ಶಿಕ್ಷೆಗೆ ಗುರಿಯಾಗಿಲ್ಲ ಮತ್ತು ಆತನ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ. ಹೀಗಾಗಿ, ಮೇಲಿನ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು, ನೀಡಲಾದ ಶಿಕ್ಷೆಯನ್ನು ಕಡಿಮೆ ಮಾಡಬಹುದು ಎಂದಾಗ ಪೀಠವು ಪಳನಿಸಾಮಿ ಪರ ವಕೀಲರು ಸಲ್ಲಿಸಿದ ಸಲ್ಲಿಕೆಗಳನ್ನು ಪರಿಗಣಿಸಿ, ಅವರನ್ನು ತಕ್ಷಣ ಬಿಡುಗಡೆ ಮಾಡಲು ಆದೇಶಿಸಿತು.

2002 ರಲ್ಲಿ, ಸುಳಿವಿನ ಆಧಾರದ ಮೇಲೆ, ತಮಿಳುನಾಡಿನ ಬೋಡಿನಾಯಕನೂರ್ ಪಟ್ಟಣದ ಮಲ್ಲಿಗೈ ವೈನ್ಸ್, ಮಾಮರಾಜರ್ ಮಾರುಕಟ್ಟೆಯ ಬಳಿ ಅನುಮಾನಾಸ್ಪದವಾಗಿ ಪಳನಿಸಾಮಿ ಮತ್ತು ಇನ್ನೊಬ್ಬ ಆರೋಪಿ ಕಲೈನನ್ನು ಪೊಲೀಸರು ಬಂಧಿಸಿದರು. ತಲೆಮರೆಸಿಕೊಂಡಿರುವ ಆರೋಪಿ (ಎ3) ಕಬೀರ್ ಕೇರಳದ ತಿರುವನಂತಪುರಂನಿಂದ ಬಂದಿದ್ದು, 10 ರೂ. ಮುಖಬೆಲೆಯ 24 ಕಟ್ಟುಗಳ ನಕಲಿ ನೋಟುಗಳನ್ನು ನೀಡಿದ್ದಾಗಿ ಪಳನಿಸಾಮಿ ತಪ್ಪೊಪ್ಪಿಕೊಂಡಿದ್ದರು.

ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಪಳನಿಸಾಮಿ ಸೆಪ್ಟೆಂಬರ್ 22, 2002 ರಂದು ಒಂದು ಕಟ್ಟು ತೆಗೆದು ಅದನ್ನು ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸಿದರು ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net