ಪೆಗಾಸಸ್ ತನಿಖೆಗೆ ಸಮಿತಿ: ಜನರ ಮೂಲಹಕ್ಕು ಉಲ್ಲಂಘನೆ ಸರಿಯಲ್ಲ ಎಂದ ಸುಪ್ರೀಂ ಕೋರ್ಟ್

Pegasus
Published on

ನವದೆಹಲಿ: ಇಸ್ರೇಲಿ ನಿರ್ವಿುತ ಪೆಗಾಸಸ್ ತಂತ್ರಾಂಶ ಬಳಸಿ ಗೂಢಚರ್ಯು ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧಿಸಿ ತನಿಖೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ವಿದ್ಯಮಾನ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ.

ರಾಜಕೀಯವಾಗಿ ಗಮನಸೆಳೆದಿದ್ದ ಈ ಪ್ರಕರಣದಲ್ಲಿ, ಗೂಢಚರ್ಯು ಆರೋಪವನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿತ್ತು. ಸುಪ್ರೀಂ ಕೋರ್ಟ್ ನ್ಯಾಯಪೀಠ ಇದನ್ನು ಗಮನಿಸಿದ್ದು, ಪತ್ರಕರ್ತರು, ಹೋರಾಟಗಾರರು, ರಾಜಕಾರಣಿಗಳ ನಡೆಯನ್ನು ಅರಿಯಲು ಅವರ ಮೊಬೈಲ್ ಫೋನ್​ಗಳಲ್ಲಿ ಪೆಗಾಸಸ್ ತಂತ್ರಾಂಶ ಅಳವಡಿಸಿ ಗೂಢಚರ್ಯು ನಡೆಸಿದ್ದು ಹೌದಾದರೆ ಅದು ಖಚಿತವಾಗಿ ಮೈ ನಡುಕ ಹುಟ್ಟಿಸುವಂಥದ್ದು. ಇಂತಹ ಆರೋಪ ಎದುರಾದಾಗ ಸರ್ಕಾರ ಕೇವಲ ಆರೋಪ ನಿರಾಕರಿಸಿದರೆ ಸಾಲದು. ನ್ಯಾಯಯುತವಾಗಿ ನಡೆದುಕೊಳ್ಳಬೇಕು. ಪ್ರತಿ ಸಲವೂ ರಾಷ್ಟ್ರೀಯ ಭದ್ರತೆಯ ವಿಚಾರ ಮುಂದಿಟ್ಟು ಎಲ್ಲದರಿಂದಲೂ ಪಾರಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ಸಮಿತಿಯ ಹೊಣೆಗಾರಿಕೆ

  • ಪೆಗಾಸಸ್ ತಂತ್ರಾಂಶವನ್ನು ಭಾರತದ ನಾಗರಿಕರ ಫೋನ್ ಅಥವಾ ಇತರೆ ಉಪಕರಣಗಳಲ್ಲಿ ಬಳಸಿ ಅವರ ಖಾಸಗಿ ಡೇಟಾ (ಮಾತುಕತೆ ಮತ್ತು ಇತರೆ ವಿವರ) ಸಂಗ್ರಹಿಸಿಡಲಾಗಿದೆಯೇ? ಎಂಬುದನ್ನು ಪತ್ತೆ ಹಚ್ಚುವುದು.
  • ಇಂತಹ ಸ್ಪೈವೇರ್ ದಾಳಿಗೆ ಒಳಗಾಗಿರುವ ಸಂತ್ರಸ್ತರು, ವ್ಯಕ್ತಿಗಳ ವಿವರ ಸಂಗ್ರಹಿಸುವುದು
  • ಪೆಗಾಸಸ್ ಸ್ಪೈವೇರ್ ಬಳಸಿಕೊಂಡು ಭಾರತದ ಪೌರರ ವಾಟ್ಸ್​ಆಪ್ ಹ್ಯಾಕ್ ಮಾಡಿದ ವಿಚಾರ 2019ರಲ್ಲಿ ಸುದ್ದಿಯಾಗಿತ್ತು. ಅಲ್ಲಿಂದೀಚೆಗೆ ಪ್ರತಿವಾದಿಯಾಗಿರುವ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ವಿವರ ಸಂಗ್ರಹಿಸುವುದು.
  • ಪೌರರ ವಿರುದ್ಧ ಬಳಸುವುದಕ್ಕಾಗಿ ಸರ್ಕಾರ ಪೆಗಾಸಸ್​ನ ಯಾವುದೇ ಸ್ಪೈವೇರ್ ತಂತ್ರಾಂಶವನ್ನು ಹೊಂದಿವೆಯೇ? ಎಂಬುದನ್ನು ಖಚಿತಪಡಿಸುವುದು
  • ಒಂದೊಮ್ಮೆ ಸರ್ಕಾರ ಸ್ಪೈವೇರ್ ಬಳಸಿದ್ದರೆ, ಅದನ್ನು ಯಾವ ಕಾನೂನು, ನಿಯಮ, ಮಾರ್ಗಸೂಚಿ ಅಥವಾ ಕಾನೂನುಬದ್ಧ ಪ್ರಕ್ರಿಯೆಯಲ್ಲಿ ಬಳಸಲಾಗಿದೆ ಎಂಬುದನ್ನು ತಿಳಿಯುವುದು
  • ಸ್ಪೈವೇರ್ ಬಳಸಿದ್ದರೆ, ಆಗ ಅಂತಹ ಬಳಕೆಗೆ ಅಧಿಕೃತ ಪರವಾನಗಿ/ಅನುಮತಿ ನೀಡಲಾಗಿದೆಯೇ?

ನ್ಯಾಯಾಂಗ ಸಮಿತಿ ರಚನೆ

ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿರುವಂಥದ್ದು. ಅವರಿಗೆ ನೆರವಾಗಲು ಒಬ್ಬ ಐಪಿಎಸ್ ಅಧಿಕಾರಿಯನ್ನು ಕೇಂದ್ರ ಸರ್ಕಾರ ನಿಯೋಜಿಸಬೇಕು. ಇದಲ್ಲದೆ, ನ್ಯಾಷನಲ್ ಫಾರೆನ್ಸಿಕ್ ಯೂನಿವರ್ಸಿಟಿಯ ಅಧಿಕಾರಿಗಳು ಕೂಡ ನ್ಯಾಯಮೂರ್ತಿಗೆ ನೆರವು ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ. ತನಿಖೆ ಮಾಡಿ ವರದಿ ಸಲ್ಲಿಸುವುದಕ್ಕೆ ಎರಡು ತಿಂಗಳ ಕಾಲಾವಕಾಶವನ್ನು ನೀಡಿದೆ.

ಸಮಿತಿ ಸದಸ್ಯರು

  • ನ್ಯಾಯಮೂರ್ತಿ ಆರ್.ವಿ. ರವೀಂದ್ರನ್
  • ಅಲೋಕ್ ಜೋಶಿ ಮಾಜಿ ಐಪಿಎಸ್ ಅಧಿಕಾರಿ (1976 ಬ್ಯಾಚ್)
  • ಸಂದೀಪ್ ಒಬೆರಾಯ್, ಇಂಟರ್​ನ್ಯಾಷನಲ್ ಆರ್ಗನೈಸೇಷನ್ ಆಫ್ ಸ್ಟಾಂಡರ್ಡೆಸೇಷನ್ / ಇಂಟರ್​ನ್ಯಾಷನಲ್ ಇಲೆಕ್ಟ್ರೊ-ಟೆಕ್ನಿಕಲ್ ಕಮಿಷನ್ / ಜಾಯಿಂಟ್ ಟೆಕ್ನಿಕಲ್ ಕಮಿಟಿಯ ಚೇರ್ಮನ್.
  • ಮೂವರು ತಾಂತ್ರಿಕ ಸದಸ್ಯರು - ನವೀನ್ ಕುಮಾರ್ ಚೌಧರಿ, ಸೈಬರ್ ಸೆಕ್ಯೂರಿಟಿ ಆಂಡ್ ಡಿಜಿಟಲ್ ಫಾರೆನ್ಸಿಕ್ಸ್​ನ ಪ್ರೊಫೆಸರ್/ಗುಜರಾತ್ ಗಾಂಧಿನಗರದ ನ್ಯಾಷನಲ್ ಫಾರೆನ್ಸಿಕ್ ಸೈನ್ಸಸ್ ಯೂನಿವರ್ಸಿಟಿಯ ಡೀನ್, ಪ್ರಭಾಕರನ್ ಪಿ., ಕೇರಳದ ಅಮೃತ ವಿಶ್ವವಿದ್ಯಾಪೀಠಂನ ಸ್ಕೂಲ್ ಆಫ್ ಇಂಜಿನಿಯರಿಂಗ್​ನ ಪ್ರೊಫೆಸರ್, ಅಶ್ವಿನ್ ಅನಿಲ್ ಗುಮಾಸ್ತೆ, ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್​ನ ಇನ್​ಸ್ಟಿ ಟ್ಯೂಟ್ ಚೇರ್ ಅಸೋಸಿಯೇಟ್ ಪ್ರೊಫೆಸರ್.

ಪೆಗಾಸಸ್ ಬೇಹುಗಾರಿಕೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ತಪರಾಕಿ ನೀಡಿದೆ. ಇದರ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ರಾಜೀನಾಮೆ ನೀಡಬೇಕು. | ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿಪಕ್ಷ ನಾಯಕ

ಪೆಗಾಸಸ್ ವಿವಾದ ಪಥ

  • 2021 ಜುಲೈ 18: ಇಸ್ರೇಲ್ ಕಂಪನಿ ಎನ್​ಎಸ್​ಒ ಗ್ರೂಪ್​ನ ಪೆಗಾಸಸ್ ಸ್ಪೈವೇರ್ ಬಳಸಿ ಭಾರತದಲ್ಲಿ ನರೇಂದ್ರ ಮೋದಿ ಸಚಿವ ಸಂಪುಟದ ಇಬ್ಬರು ಸಚಿವರು, ಪತ್ರಕರ್ತರು, ವಕೀಲರು, ರಾಜಕಾರಣಿಗಳು ಸೇರಿ 300ಕ್ಕೂ ಹೆಚ್ಚು ಫೋನ್ ನಂಬರ್​ಗಳನ್ನು ಟ್ರಾ್ಯಪ್ ಮಾಡಲಾಗಿದೆ ಎಂಬ ವರದಿ ಪ್ರಕಟ
  • ಜುಲೈ 19: ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ವರ್ಣರಂಜಿತವಾದುದೇ ಹೊರತು, ಅದರಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ ಕೇಂದ್ರ ಸರ್ಕಾರ.
  • ಜುಲೈ 20: ಜಂಟಿ ಸಂಸದೀಯ ಸಮಿತಿ ತನಿಖೆಗೆ ಪೆಗಾಸಸ್ ಸ್ಪೈವೇರ್ ಪ್ರಕರಣ ಒಪ್ಪಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಂಸತ್ ಕಲಾಪದಲ್ಲಿ ಪ್ರತಿಭಟನೆ
  • ಜುಲೈ 22: ಸುಪ್ರೀಂ ಕೋರ್ಟ್​ನಲ್ಲಿ ಪೆಗಾಸಸ್ ವಿವಾದ ಸಂಬಂಧ ಎಸ್​ಐಟಿ ತನಿಖೆ ಆಗ್ರಹಿಸಿ ಪಿಟಿಷನ್ ದಾಖಲು
  •  ಸೆಪ್ಟೆಂಬರ್ 12: 12 ಸಂಯೋಜಿತ ದಾವೆಗಳ ಕೇಸ್​ನ ಮಧ್ಯಂತರ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
  • ಅಕ್ಟೋಬರ್ 27: ಸ್ವತಂತ್ರ ತನಿಖೆಗೆ ನ್ಯಾಯಾಂಗ ಸಮಿತಿ ರಚಿಸಿದ ಸುಪ್ರೀಂ.

ಗಮನಸೆಳೆದ ಸಿಜೆಐ ಹೇಳಿಕೆ

ಪೆಗಾಸಸ್ ಕುರಿತ 12 ದಾವೆಗಳ ಸಂಯೋಜಿತ ಕೇಸ್​ನ ವಿಚಾರಣೆಯ ತೀರ್ಪು ಪ್ರಕಟಿಸುವ ಮುನ್ನ ಸಿಜೆಐ ಎನ್.ವಿ. ರಮಣ ಅವರು 1984ರಲ್ಲಿ ಇಂಗ್ಲಿಷ್ ಸಾಹಿತಿ ಜಾರ್ಜ್ ಆರ್ವೆಲ್ ನೀಡಿದ್ದ ‘ಒಂದು ರಹಸ್ಯವನ್ನು ಕಾಪಾಡಬೇಕು ಎಂದು ನೀವು ಬಯಸಿದರೆ, ಅದನ್ನು ನೀವು ನಿಮ್ಮಿಂದಲೇ ಬಚ್ಚಿಟ್ಟು ಕೊಳ್ಳಬೇಕು’ ಎಂಬ ಹೇಳಿಕೆಯನ್ನು ಉಲ್ಲೇಖಿಸಿದರು.

ಯಾವ ಆಧಾರದಲ್ಲಿ ಸಮಿತಿ ಕಾರ್ಯ?

  • ಖಾಸಗಿತನದ ಹಕ್ಕನ್ನು ಸಂರಕ್ಷಿಸಲು ಮತ್ತು ನಿಗಾ ವ್ಯವಸ್ಥೆಯಲ್ಲಿರುವ ಪ್ರಕ್ರಿಯೆಗಳು ಮತ್ತು ಹಾಲಿ ಕಾನೂನುಗಳ ಪರಿಶೀಲನೆ.
  • ಸೈಬರ್ ಸೆಕ್ಯೂರಿಟಿ ಸುಧಾರಿಸುವುದು ಮತ್ತು ಉನ್ನತೀಕರಿಸುವ ವಿಷಯ
  • ಪೌರರ ಖಾಸಗಿತನದ ಹಕ್ಕಿನ ಮೇಲೆ ಅತಿಕ್ರಮಣ ತಡೆಯುವುದನ್ನು ಖಾತರಿಪಡಿಸುವುದು, ವಿಶೇಷವಾಗಿ ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಸ್ಪೈವೇರ್ ಮುಂತಾದವುಗಳನ್ನು ಬಳಸಿಕೊಂಡು ಈ ಕೆಲಸ ಮಾಡದಂತೆ ತಡೆಯುವುದು
  • ಪೌರರಿಗೆ ತಮ್ಮ ಉಪಕರಣಗಳ ಮೇಲೆ ಅಕ್ರಮ ನಿಗಾ, ಗೂಢಚರ್ಯುಯ ಗುಮಾನಿ ಬಂದರೆ ದೂರು ಸಲ್ಲಿಸುವುದಕ್ಕೆ ಒಂದು ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತು
  • ಸೈಬರ್ ಸೆಕ್ಯೂರಿಟಿ ಅಪಾಯಗಳ ತನಿಖೆಗೆ ಸುಸಜ್ಜಿತ ಸ್ವತಂತ್ರ ಪ್ರಮುಖ ತನಿಖಾ ಸಂಸ್ಥೆ ಸ್ಥಾಪಿಸುವ ಬಗ್ಗೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net