ಎಸ್‌ಸಿ ಒಳ ಮೀಸಲು ವರದಿ ಶೀಘ್ರವೇ ಸಿದ್ಧ: ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ | SC classification based on social justice

BJP delegation
Published on

ಬೆಂಗಳೂರು: ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣಕ್ಕೆ ಪೂರಕವಾಗಿ ತ್ವರಿತ ಸಮರ್ಪಕ ವರದಿ ಸಿದ್ಧಪಡಿಸಲಾಗುವುದು. ಎಸ್‌ಸಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲಾಗುವುದು ಎಂದು ಏಕ ಸದಸ್ಯ ಆಯೋಗದ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಭರವಸೆ ನೀಡಿದರು.

ಏಕ ಸದಸ್ಯ ಆಯೋಗದ ಕಚೇರಿಯಲ್ಲಿ ಮಂಗಳವಾರ ಭೇಟಿಯಾದ ಬಿಜೆಪಿ ರಾಜ್ಯ ನಿಯೋಗದ ಜತೆಗೆ ಚರ್ಚಿಸಿದ ಅವರು, ಹಲವು ಮಾಹಿತಿ ಪಡೆದುಕೊಂಡರು. ಪ್ರಯೋಗಿಕ ದತ್ತಾಂಶಗಳು, ವಿವಿಧ ಆಯೋಗಗಳ ವರದಿಗಳು, ಬೇರೆ ರಾಜ್ಯಗಳಲ್ಲಿ ಕೈಗೊಂಡ ಕ್ರಮಗಳ ಕುರಿತು ಪ್ರಸ್ತಾಪವಾಯಿತು.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಸ್‌ಸಿ ಒಳ ಮೀಸಲು ಕಲ್ಪಿಸುವುದಕ್ಕೆ ಅವಕಾಶ ಲಭಿಸಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕ, ತಾಜಾ, ನಿಖರ ಮತ್ತು ಸಮಗ್ರ ದತ್ತಾಂಶಗಳ ಅಗತ್ಯವಿದೆ. ಹಿಂದುಳಿದಿರುವಿಕೆ ಮಾನದಂಡವನ್ನು ಮಾತ್ರ ಅನ್ವಯಿಸುವುದು ಕಷ್ಟ ಸಾಧ್ಯವಾಗಲಿದೆ ಎಂಬ ಇಂಗಿತವನ್ನು ನಿಯೋಗ ವ್ಯಕ್ತಪಡಿಸಿದೆ.

ಬಿಜೆಪಿ ಸರ್ಕಾರದ ನಿರ್ಣಯ

ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ವಿಷಯದಲ್ಲಿನ ದತ್ತಾಂಶಗಳ ನಿಖರತೆ, ಗೊಂದಲವೂ ಬಗೆಹರಿಯಬೇಕಾಗಿದೆ. ಛಲವಾದಿ ಮತ್ತು ಮಾದಿಗರು ಆದಿ ಕರ್ನಾಟಕ ಇಲ್ಲವೇ ಆದಿ ದ್ರಾವಿಡ ಎಂದು ನಮೂದಿಸಿದ್ದಾರೆ ಎನ್ನಲಾಗುತ್ತಿದ್ದು, 12 ಜಿಲ್ಲೆಗಳಲ್ಲಿ ಈ ಸಮಸ್ಯೆಯಿದೆ ಎಂದು ಆಯೋಗದ ಗಮನಸೆಳೆಯಲಾಯಿತು.

ನ್ಯಾ.ನಾಗಮೋಹನದಾಸ್ ಅವರ ಶಿಾರಸಿನ ಅನ್ವಯ ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮೀಸಲು ಪ್ರಮಾಣವನ್ನು ಶೇ.15 ರಿಂದ 17, ಪರಿಶಿಷ್ಟ ಪಂಗಡ ಮೀಸಲು ಪ್ರಮಾಣದ ಶೇ.4 ರಿಂದ 7ಕ್ಕೆ ಹೆಚ್ಚಿಸಿತು.

ಅಲ್ಲದೆ, ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಸಚಿವ ಸಂಪುಟದ ಉಪಸಮಿತಿಯು 2011ರ ಜನಗಣತಿಯ ದತ್ತಾಂಶಗಳ ಆಧಾರದಲ್ಲಿ ಎಸ್‌ಸಿ ಮೀಸಲು ವರ್ಗೀಕರಣದ ವರದಿ ಸಲ್ಲಿಸಿತ್ತು ಎಂದು ಸಮಿತಿಯ ಸದಸ್ಯರೂ ಆಗಿದ್ದ ಸಂಸದ ಗೋವಿಂದ ಕಾರಜೋಳ ವಿವರಿಸಿದರು.

ಎಸ್‌ಸಿ, ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಳದಿಂದ ಮೀಸಲು ಮಿತಿ ಶೇ.50 ದಾಟಲಿದೆ. ಆದರೆ ಎಸ್‌ಸಿ, ಎಸ್‌ಟಿಗೆ ಮೀಸಲು ಹೆಚ್ಚಳ ವಿಷಯದಲ್ಲಿ ಶೇ.50ರ ಮಿತಿ ಅನ್ವಯವಾಗದು. ಜಾರ್ಖಂಡ್, ಛತ್ತಿಸಗಢ ಸೇರಿ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಬುಡಕಟ್ಟು, ಆದಿವಾಸಿ ಜನಸಂಖ್ಯೆ ಶೇ.80ರಷ್ಟು ಇರುವ ಅಂಶದತ್ತ ನಿಯೋಗ ಬೆಳಕು ಚೆಲ್ಲಿದೆ.

ಆದಿ ದ್ರಾವಿಡ, ಆದಿ ಕರ್ನಾಟಕ ಗೊಂದಲ ಸರಿಪಡಿಸಲು ಮಾಧುಸ್ವಾಮಿ ಸಮಿತಿಯು ತಾಲೂಕು, ಜಿಲ್ಲೆಗಳ ದತ್ತಾಂಶವನ್ನು ಬಳಸಿದ್ದರ ಬಗ್ಗೆ ನ್ಯಾ.ನಾಗಮೋಹನ್‌ದಾಸ್ ಅವರಿಗೆ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ವಿವರಿಸಿದರು.

ನಿಯೋಗದಲ್ಲಿ ಶಾಸಕರಾದ ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮೂಡ್, ಪ್ರಮುಖರಾದ ವಾದಿರಾಜ್, ಡಾ.ಆನಂದಕುಮಾರ್, ಬಿ.ಎಚ್.ಅನಿಲ್‌ಕುಮಾರ್, ಬಸವರಾಜ ದಡೆಸುಗೂರು, ಎಂ.ಶಂಕರಪ್ಪ, ನರಸಪ್ಪ, ರ್ನಾಂಡಿಸ್ ಹಿಪ್ಪಳಗಾಂವ್, ವೆಂಕಟೇಶ ದೊಡ್ಡೇರಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net