

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಈ ವಿಷಯದಲ್ಲಿ ಯಾರಿಗೂ ಸಂಶಯ ಬೇಡ. ಇದಕ್ಕಾಗಿ ಹೋರಾಟಕ್ಕೆ ಇಳಿಯುವುದೂ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮೇಲೆ ಸಮಾಜ ಕಲ್ಯಾಣ ಇಲಾಖೆ ಶನಿವಾರ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ 118ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಎಸ್‌ಸಿ ಮೀಸಲು ವರ್ಗೀಕರಣಕ್ಕೆ ಸುಪ್ರೀಂ ಕೋರ್ಟ್ ಆದೇಶವಿದೆ. ವೈಜ್ಞಾನಿಕ, ನಿಖರ ದತ್ತಾಂಶ ಆಧಾರದಲ್ಲಿ ಒಳ ಮೀಸಲು ಕಲ್ಪಿಸಬೇಕಾಗಿದೆ. ಇದಕ್ಕಾಗಿ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವನ್ನು ರಚಿಸಿ ಎರಡು ತಿಂಗಳ ಕಾಲಾವಕಾಶ ನೀಡಿದ್ದೇವೆ.
ನಿಗದಿತ ಗಡುವಿನೊಳಗೆ ಆಯೋಗ ವರದಿ ಸಲ್ಲಿಸಲಿದ್ದು, ಎರಡು ತಿಂಗಳ ಬಳಿಕ ಎಸ್‌ಸಿ ಮೀಸಲು ವರ್ಗೀಕರಣ ಜಾರಿಗೊಳಿಸುತ್ತೇವೆ. ಅಲ್ಲಿಯವರೆಗೆ ಯಾವುದೇ ನೇಮಕ, ಬಡ್ತಿಗಳ ಮಾಡುವುದಿಲ್ಲ ಎಂಬ ನಿರ್ಧರಿಸಿ ಆದೇಶಿಸಲಾಗಿದೆ ಎಂದರು.
ಸರ್ಕಾರ ನಿರ್ಬಂಧ ವಿಧಿಸಿದ ನಂತರ ಬಡ್ತಿಗೆ ಅವಕಾಶವಿಲ್ಲ. ಆದರೂ ಕೆಲವು ಇಲಾಖೆಗಳಲ್ಲಿ ಬಡ್ತಿ ಪ್ರಕ್ರಿಯೆ ನಡೆದಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ನನ್ನ ಗಮನಕ್ಕೆ ತಂದಿದ್ದಾರೆ. ಹಾಗೊಂದು ವೇಳೆ ಯಾವುದಾದರೂ ಇಲಾಖೆ ಬಡ್ತಿ ನೀಡಿದ್ದರೆ ಹಿಂಪಡೆಯಲು ಸೂಚಿಸುವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಬಾಬು ಜಗಜೀವನರಾಂ ಸ್ವಾತಂತ್ರ್ಯ ಪ್ರೇಮಿ, ಸಾಮಾಜಿಕ ನ್ಯಾಯದ ಪರವಾಗಿದ್ದವರು. ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ಇರುವವರೆಗೂ ಮೀಸಲಾತಿ ಇರಬೇಕು ಎಂದು ಸ್ಪಷ್ಟವಾದ ನಿಲುವು ಹೊಂದಿದ್ದರು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ ಬಳಿಕ ಎಲ್ಲರೂ ಮೀಸಲಾತಿ ಫಲಾನುಭವಿಗಳೇ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸುಪ್ತ ಪ್ರತಿಭೆ ಹೊರಗೆ ತರುವ ಶಿಕ್ಷಣದಿಂದ ಯುವ ಸಮೂಹ ಸ್ವಾಭಿಮಾನಿಗಳಾಗಿ ಬೆಳೆಯಲು ಸಾಧ್ಯವಿದೆ.ಜಾತಿ ಸೃಷ್ಟಿಸಿದವರು ನಾವಲ್ಲ. ಆದರೆ ಈ ಜಾತಿಯ ಅಸಮಾನತೆಗೆ ಬಲಿ ಆಗಿರುವವರು ನಾವು. ಜಾತಿ ಇರುವವರೆಗೂ ಸಮಾನ ಅವಕಾಶಗಳು ಸಿಗುವುದಿಲ್ಲ. ಏಕೆಂದರೆ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಎಂದರು.
ಬಾಬು ಜಗಜೀವನ್ ರಾಂ ಅವರು ಕೇಂದ್ರ ಸಚಿವರಾಗಿ ಹಸಿರು ಕ್ರಾಂತಿ ಮಾಡಿ ಎಲ್ಲರಿಗೂ ಆಹಾರ ಸಿಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕಾಳಜಿಗಳನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟರುವ ಹೆಜ್ಜೆ ಗುರುತುಗಳನ್ನು ಅನುಸರಿಸಬೇಕು ಎಂದರು.
ಜಗಜೀವನ್ ರಾಮ್ ಮತ್ತು ಅಂಬೇಡ್ಕರ್ ಇಬ್ಬರಿಗೂ ಸಮಾಜದ ಕಷ್ಟ ಗೊತ್ತಿತ್ತು. ಈ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗವಾಗಿ ಸಂವಿಧಾನ ಬಂತು, ನಮಗೆಲ್ಲಾ ಶಿಕ್ಷಣ ಸಿಕ್ಕಿತು. ಮತ್ತೊಬ್ಬ ಅಂಬೇಡ್ಕರ್, ಜಗಜೀವನ ರಾಂ ನಮಗೆ ಸಿಗುವುದಿಲ್ಲ. ಮಹನೀಯರು ಬಿಟ್ಟು ಹೋಗಿರುವ ಚಿಂತನೆ ಮತ್ತು ಕಾಳಜಿಗಳನ್ನು ಪಾಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ ಧರ್ಮ, ಜಾತಿ ಸಂಘರ್ಷದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇಂತಹ ಸಂದರ್ಭದಲ್ಲಿ ಬಾಬುಜಿ ಬಿಟ್ಟು ಹೋದ ಹೆಜ್ಜೆ ಗುರುತಿನಲ್ಲಿ ಸಾಗಬೇಕು. ಅಸ್ಪೃಶ್ಯತೆ ನಿವಾರಣೆ, ಸಮಾನತೆ ಸಾಧಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ ಬಾಬೂಜಿ ವಿವಿಧ ಸಚಿವ ಖಾತೆಗಳನ್ನು ನಿಭಾಯಿಸಿ ಜನಪರ ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೊಳಿಸಿದರು ಎಂದು ನೆನಪಿಸಿದರು.