

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು ಜಾರಿಗೊಳಿಸಿಯೇ ಸಿದ್ಧ. ಈ ವಿಷಯದಲ್ಲಿ ಹಿಂದಕ್ಕೆ ಹೆಜ್ಜೆ ಇಡುವ ಸಂಭವವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾನ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಿಗ ಸಮಾಜದ ಹಾಲಿ-ಮಾಜಿ ಜನಪ್ರತಿನಿಧಿಗಳ ಸಭೆಯಲ್ಲಿ ಎರಡು ಗಂಟೆಗಳ ಸುಧೀರ್ಘ ಚರ್ಚೆ ಬಳಿಕ ಸಿಎಂ ಈ ಭರವಸೆ ನೀಡಿದರು.
ಒಳಮೀಸಲಾತಿ ನಮ್ಮ ಪಕ್ಷದ ಕೂಗು. ಸದಾಶಿವ ನೇತೃತ್ವದಲ್ಲಿ ಆಯೋಗ ನೇಮಕ ಮಾಡಿದ್ದು, ಜತೆಗೆ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವೆ. ಜತೆಗೆ ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು, ಈ ವಿಷಯದಲ್ಲಿ ಪಕ್ಷ ಕೊಟ್ಟ ಮಾತನ್ನು ಈಡೇರಿಸುವಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, ಈ ನಮ್ಮ ನಡೆಗೆ ಸುಪ್ರೀಂ ಕೋರ್ಟ್ ತೀರ್ಪು ಸಹಕಾರಿ ಆಗಿದೆ ಎಂದರು.
ಅ.24ರಂದು ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಒಮ್ಮತದ ತೀರ್ಮಾನ ಕೈಗೊಂಡು ಪರಿಶಿಷ್ಟ ಜಾತಿಯ ಎಲ್ಲ ಸಮುದಾಯದಗಳಿಗೆ ಒಳ್ಳೆ ಸುದ್ದಿ ಕೊಡುವೆ. ಈ ಸಂಬಂಧ ತೀರ್ಮಾನ ಕೈಗೊಳ್ಳಲು ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿನ ಉಪ ಚುನಾವಣೆ ನೀತಿ ಸಂಹಿತೆ ಅಡ್ಡಿ ಬರಲಿದೆಯೇ ಎಂಬುದನ್ನು ಚುನಾವಣಾ ಆಯೋಗದ ಮೂಲಕ ತಿಳಿದುಕೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಆರಂಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ, ಅನೇಕ ವರ್ಷಗಳ ಸಹಸ್ರಾರು ಮಂದಿಯ ಹೋರಾಟದ ಫಲ ಈಗ ನೀಡುತ್ತಿದೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಮಾದಿಗ ಮನೆ ಬಾಗಿಲಿಗೆ ಭಾಗ್ಯವನ್ನೇ ತಂದು ನಿಲ್ಲಿಸಿದೆ. ಐಸಿಯು ಕೊಠಡಿಯಲ್ಲಿದ್ದ ಸಮುದಾಯವನ್ನು ಸ್ವಚ್ಛ ಪರಿಸರಕ್ಕೆ ತಂದು ಕೋರ್ಟ್ ಬಿಟ್ಟಿದೆ. ಈ ಶುದ್ಧ ಗಾಳಿ ಸಿಗಲಿದ್ದು, ಅದಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಶಕ್ತಿ ತುಂಬಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ತೆಲಂಗಾಣದಲ್ಲಿ ಅಲ್ಲಿನ ಸಿಎಂ ರೇವಂತ್ ರೆಡ್ಡಿ ಈಗಾಗಲೇ ಒಳಮೀಸಲು ಜಾರಿಗೆ ಬದ್ಧ ಎಂದು ಘೋಷಿಸಿದ್ದು, ಅದರ ಭಾಗವಾಗಿ ಉದ್ಯೋಗ ನೇಮಕಾತಿಗಳಿಗೆ ತಡೆ ಹಾಕಿದ್ದಾರೆ. ಹರಿಯಾಣದಲ್ಲಿ ಅಲ್ಲಿನ ಸಿಎಂ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತಂದಿದೆ. ಅದೇ ಮಾರ್ಗವನ್ನು ರಾಜ್ಯ ಸರ್ಕಾರ ಅನುಸರಿಬೇಕೆಂದು ಕೋರಿಕೆಗೆ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ದನಿಗೂಡಿಸಿದರು.
ಈಗಾಗಲೇ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ. ಕಾಂಗ್ರೆಸ್ ಪಕ್ಷದ ಸಾಂಪ್ರಾದಾಯಕ ಮತಗಳಾದ ಮಾದಿಗರ ಮೇಲೆ ಕಣ್ಣಿಟಿದ್ದಾರೆ. ಆದ್ದರಿಂದ ಪಕ್ಷ ಈ ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳಬೇಕು. ತಮ್ಮ ಮೇಲೆ ವಿಶ್ವಾಸವಿದ್ದು, ಉದ್ಯೋಗ ನೇಮಕಾತಿ ತಡೆಗೆ ಆದೇಶಿಸುವ ಮೂಲಕ ಸಂದೇಶ ರವಾನಿಸಬೇಕೆಂದು ಮನವಿ ಮಾಡಿದರು.
ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಚಿವ ಶಿವಣ್ಣ ಮತನಾಡಿದರು. ಶಾಸಕರಾದ ಮಾಯಕೊಂಡ ಬಿ.ಬಸವಂತಪ್ಪ, ನೆಲಮಂಗಲ ಶ್ರೀನಿವಾಸ್, ಮಾಜಿ ಶಾಸಕ ಧರ್ಮಸೇನಾ, ಡಾ.ತಿಮ್ಮಯ್ಯ ಇತರರಿದ್ದರು.