VIDEO: ಅಣ್ಣಾ... ಕೈ ಬಿಡ್ಬೇಡಿ, ಸತ್ತೋಗ್ತೇನೆ... ರೈಲು ಎಂದರೆ ಕನಸಲ್ಲೂ ಕಳ್ಳ ಬೆಚ್ಚಿಬೀಳುವಂತೆ ಮಾಡಿದ ಪ್ರಯಾಣಿಕರು!

kalla
Published on

ಭಾಗಲ್ಪುರ(ಬಿಹಾರ): ಖದೀಮನೊಬ್ಬ ಕಿಟಕಿಯಿಂದ ಪ್ರಯಾಣಿಕರೊಬ್ಬರ ಮೊಬೈಲ್​ ಫೋನ್​ ಕದಿಯಲು ಯತ್ನಿಸಿದ್ದ ಸಂದರ್ಭದಲ್ಲಿ ಆತನ ಕೈಹಿಡಿದು ಸುಮಾರು 10 ಕಿ.ಮೀವರೆಗೆ ಆತನನ್ನು ಹಿಡಿದುಕೊಂಡಿದ್ದ ಘಟನೆ ಬಿಹಾರದ ಸಾಹೇಬ್​ಪುರದ ಕಮಲ್​ ಸ್ಟೇಷನ್​ನಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಇನ್ನೊಂದು ಆದರೆ ಸ್ವಲ್ಪ ಭಿನ್ನವಾದ ಘಟನೆ ಬಿಹಾರದಲ್ಲಿಯೇ ನಡೆದಿದೆ.

ಭಾಗಲ್ಪುರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಮೊಬೈಲ್​ ಕಳ್ಳನಿಗೆ ಪ್ರಯಾಣಿಕರು ಸುಮಾರು ಐದು ಕಿ.ಮೀ ನರಕ ದರ್ಶನ ಮಾಡಿಸಿದ್ದಾರೆ. ಜಮಾಲ್‌ಪುರ ಸಾಹಿಬ್‌ಗಂಜ್ ಪ್ಯಾಸೆಂಜರ್ ರೈಲಿನಲ್ಲಿ ಈ ಘಟನೆ ನಡೆದಿದೆ.

ರೈಲು ಭಾಗಲ್ಪುರದ ಲೈಲಾಖ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿ ಕೆಲವು ಕಳ್ಳರು ಏಕಾಏಕಿ ನುಗ್ಗಿ ಮೊಬೈಲ್​ ಅಲ್ಲಿದ್ದವರ ಮೊಬೈಲ್​ ಫೋನ್​ ತೆಗೆದುಕೊಂಡು ಎಸ್ಕೇಪ್​ ಆಗಿದ್ದಾರೆ. ರೈಲು ನಿಲ್ಲುವ ಹಾಗೂ ಬಿಡುವ ಸಮಯದ ನಡುವೆ ಈ ಕೆಲಸ ಮಾಡುತ್ತಿದ್ದಾರೆ ಇಲ್ಲಿಯ ಕಳ್ಳರು. ಪ್ರಯಾಣಿಕರು ಕೂಗಿಕೊಳ್ಳುವಷ್ಟರಲ್ಲಿ ಮೊಬೈಲ್​ ಫೋನ್​ ತೆಗೆದುಕೊಂಡು ಎಸ್ಕೇಪ್​ ಆಗುತ್ತಾರೆ. ಇಲ್ಲಿಯೂ ಹಾಗೆಯೇ ಆಗಿದೆ. ಬಂದಿದ್ದ ಕಳ್ಳರ ಪೈಕಿ ಉಳಿದವರು ಓಡಿ ಹೋಗುವಲ್ಲಿ ಯಶಸ್ವಿಯಾದರೆ, ಒಬ್ಬ ಮಾತ್ರ ಸಿಕ್ಕಿಬಿದ್ದಿದ್ದಾನೆ.

ಆತನನ್ನು ಹಿಗ್ಗಾಮುಗ್ಗ ಥಳಿಸಿದ ಪ್ರಯಾಣಿಕರು ಅಷ್ಟಕ್ಕೇ ಸುಮ್ಮನಾಗದೇ ಆತನನ್ನು ರೈಲಿನ ಕಿಟಕಿಯ ಹೊರಗೆ ನೇತಾಡುವಂತೆ ಮಾಡಿದ್ದಾರೆ. ಸುಮಾರು ಐದು ಕಿ.ಮೀ ಆತ ಹೀಗೆಯೇ ನೇತಾಡಿಕೊಂಡು ಹೋಗಿದ್ದಾನೆ. ಆತ ಅಲ್ಲಿಂದ ತಪ್ಪಿಸಿಕೊಂಡು ಹೋಗದಂತೆ ಒಳಗಿರುವ ಪ್ರಯಾಣಿಕರು ಆತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ಕಳ್ಳ ಅಣ್ಣಾ ನನ್ನ ಕೈ ಬಿಡಬೇಡಿ, ಸತ್ತೇ ಹೋಗುತ್ತೇನೆ ಎಂದು ಕೂಗಿಕೊಂಡಿದ್ದಾನೆ.

ಇದರ ವಿಡಿಯೋ ವೈರಲ್​ ಆಗಿದೆ. ಜನರಿಂದ ತಪ್ಪಿಸಿಕೊಳ್ಳಲು ಆತ ಹಲವು ಬಾರಿ ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾನೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಬಳಿಕ ಆತನನ್ನು ಕಹಲ್‌ಗಾಂವ್‌ನಲ್ಲಿ ಆರ್‌ಪಿಎಫ್‌ ಸಿಬ್ಬಂದಿಗೆ ಒಪ್ಪಿಸಲಾಗಿದೆ. (ಏಜೆನ್ಸೀಸ್​)

ಇಲ್ಲಿದೆ ನೋಡಿ ವಿಡಿಯೋ: (ಕೃಪೆ ಎನ್​ಡಿಟಿವಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net