

ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆಂತಯ್ಯ
ಸಂತೆಯೊಳಗೊಂದು ಮನೆಯಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
ಅಕ್ಕಮಹಾದೇವಿಯವರ ವಚನದಂತೆ ಬದುಕಿನ ಬಂಡಿಯಲ್ಲಿ ಸಾಗುತ್ತಿರುವಾಗ ಏನೆಲ್ಲ ಕಷ್ಟ ನಿಷ್ಠುರಗಳು ಬರುತ್ತವೆ. ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿದಾಗ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ. ಈ ಸಮಾಜದಲ್ಲಿ ಒಂದು ಒಳ್ಳೆಯ ಕೆಲಸವನ್ನು ಪ್ರಾರಂಭಿಸಿದಾಗ ಟೀಕೆ ಟಿಪ್ಪಣಿಗಳು, ಆಪಾದನೆಗಳು ಬರುವುದು ಸಹಜ. ಆದರೆ ಆ ಎಲ್ಲ ಟೀಕೆ ಟಿಪ್ಪಣಿಗಳಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡುವ ಛಾತಿ ಯಾರಲ್ಲಿ ಇರುತ್ತದೆಯೋ ಅವರು ಬದುಕಿನ ಪಯಣದಲ್ಲಿ ಅಂದುಕೊಂಡ ಗುರಿಯನ್ನು ಈಡೇರಿಸುತ್ತಾರೆ. ಕೊನೆಗೆ ಯಾವ ಸಮಾಜದಿಂದ ನಿಂದನೆಗೆ ಒಳಗಾಗಿರುತ್ತಾರೋ ಅದೇ ಸಮಾಜದಿಂದ ಮೆಚ್ಚುಗೆಯನ್ನೂ ಗಳಿಸುತ್ತಾರೆ. ನಮ್ಮ ಸಮಾಜಕ್ಕೆ ದುಡಿದ ಹಲವು ಮಹನೀಯರು ಇದೇ ರೀತಿ ಕಲ್ಲುಮುಳ್ಳುಗಳ ಹಾದಿಯಲ್ಲಿ ಸಾಗಿರುವ ಸಾಕಷ್ಟು ನಿದರ್ಶನಗಳಿವೆ. ಅದರಲ್ಲಿ ನಮ್ಮ ದೇಶದ ಮೊದಲ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆಯವರೂ ಒಬ್ಬರು.
ಅತ್ಯಂತ ಸಾಮಾನ್ಯ ಕುಟುಂಬದಲ್ಲಿ 1831 ಜನವರಿ 3ರಂದು ಮಹಾರಾಷ್ಷ›ದ ಸಾತಾರಾ ಜಿಲ್ಲೆಯ ನೈಗಾಂನ್ ಗ್ರಾಮದಲ್ಲಿ ಹುಟ್ಟಿದ ಸಾವಿತ್ರಿಬಾಯಿ 8ನೆಯ ವರ್ಷದಲ್ಲೇ ಜ್ಯೋತಿಬಾ ಫುಲೆ ಅವರನ್ನು ವಿವಾಹವಾದರು. ಮುಂದೆ ಈ ದಂಪತಿ ಶೋಷಿತರು, ದಮನಿತರ ಪರ ಕೆಲಸ ಮಾಡಿದರು. ಪತಿಯಿಂದಲೇ ಶಿಕ್ಷಣದ ಮಹತ್ವ ಅರಿತು ಅಕ್ಷರಾಭ್ಯಾಸ ಮಾಡಿದ ಸಾವಿತ್ರಿಬಾಯಿ ದೇಶದ ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು.
ಅಂದಿನ ಕಾಲದಲ್ಲಿ ಧಾರ್ವಿುಕ ಕಟ್ಟುಪಾಡುಗಳ ಮಧ್ಯೆ ಮಹಿಳೆಯೊಬ್ಬಳು ಶಿಕ್ಷಕಿಯಾಗುವುದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಕಟುಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಂಡು ಶಿಕ್ಷಣದ ಮೆಟ್ಟಿಲನ್ನು ಹತ್ತಿದ್ದು ದೊಡ್ಡ ಸಾಹಸವೇ ಸರಿ! ಆದರೂ ಛಲಬಿಡದೆ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸಿದವರು ಸಾವಿತ್ರಿಬಾಯಿ.
ಅವರು ಪಾಠಶಾಲೆಗೆ ಹೊರಟಾಗ ಕೆಲವರು ಕೇಕೆ ಹಾಕಿ ಹಂಗಿಸುತ್ತಿದ್ದರು. ಅವರ ಮೇಲೆ ಕೆಸರು, ಸಗಣಿ ಎರಚಿ, ಅವಮಾನ ಮಾಡಿದರು. ಆದರೂ ಧೃತಿಗೆಡದ ಸಾವಿತ್ರಿಬಾಯಿ ಯಾವಾಗಲೂ ಒಂದು ಸೀರೆಯನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರಗೊಳ್ಳದೆ ಶಾಲೆಗೆ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ಹಲವು ವಿರೋಧದ ನಡುವೆಯೂ ಅವರು ದೇಶದಲ್ಲಿ ಮೊಟ್ಟಮೊದಲ ಹೆಣ್ಣುಮಕ್ಕಳ ಪ್ರತ್ಯೇಕ ಶಾಲೆ ಆರಂಭಿಸಿದರು. ಹೆಣ್ಣುಮಕ್ಕಳ ಶಾಲೆಗಳನ್ನು ತೆರೆಯಲು ಅವರಿಗೆ ಕೈ ಜೋಡಿಸಿದವರು ಪತಿ ಜ್ಯೋತಿಬಾ ಫುಲೆ.
ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತೊಲಗಿಸಲು ಮೊದಲು ಮಹಿಳೆ ಶಿಕ್ಷಿತಳಾಗಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ವಿಚಾರಗಳನ್ನು ಸಾವಿತ್ರಿಬಾಯಿ ಆಗಲೇ ಪ್ರತಿಪಾದಿಸಿದರು. ಹೆಣ್ಣಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸನ್ಮಾರ್ಗದತ್ತ ಹೋಗುತ್ತದೆ. ಆ ಮೂಲಕ ಸಮಾಜದ ದಾರಿದ್ರ್ಯತನಕ್ಕೆ ತಿಲಾಂಜಲಿ ಇಡಬಹುದು ಎಂದು ತಮ್ಮ ಕಾರ್ಯಗಳ ಮೂಲಕವೇ ತೋರಿಸಿಕೊಟ್ಟ ಫುಲೆ ಅಕ್ಷರತಾಯಿ ಎನಿಸಿಕೊಂಡರು. ಸಾವಿತ್ರಿಬಾಯಿ ಫುಲೆಯವರ ಸಾಧನೆಗಳ ಹಿಂದೆ ಜ್ಯೋತಿಬಾ ಫುಲೆಯವರ ಸಹಾಯಹಸ್ತವಿದೆ. ಹೀಗಾಗಿಯೇ 1848ರಿಂದ 1852ರ ಅವಧಿಯಲ್ಲಿ 18 ಪಾಠಶಾಲೆಗಳನ್ನು ಫುಲೆ ದಂಪತಿ ತೆರೆದರು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸ ಕಾರ್ಯಗಳನ್ನು ಸಾವಿತ್ರಿಬಾಯಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಕೇಶಮುಂಡನೆ ವಿರುದ್ಧ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರಥಮವಾಗಿ ಶಾಲೆಗಳನ್ನು ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. 187 ವರ್ಷಗಳ ಹಿಂದೆಯೇ ಜ್ಯೋತಿಬಾ ಫುಲೆ ದಂಪತಿ ವಿದ್ಯೆ ಎಲ್ಲರಿಗೂ ಸಿಗಬೇಕು ಎಂಬ ಆಲೋಚನೆ ಮಾಡಿದ್ದು ಮಹತ್ವದ ಸಂಗತಿ. ಜಾತಿ, ವರ್ಗ ಭೇದ ಮಾಡದೆ ಎಲ್ಲರಿಗೂ ಅಕ್ಷರದೂಟ ಉಣಬಡಿಸಿದ ಸಾವಿತ್ರಿಬಾಯಿ ಮಹಿಳೆಯರು ಕೂಡ ಪುರಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ-ಕಾರ್ಪಣ್ಯಗಳನ್ನು ಲೆಕ್ಕಿಸದೆ ಮಹಿಳಾ ಸಂಕುಲಕ್ಕೆ ಶೈಕ್ಷಣಿಕ ರಹದಾರಿ ತೋರಿಸಿದರು. ಇವರ ಸಾಧನೆಯನ್ನು ಪರಿಗಣಿಸಿ ಬ್ರಿಟಿಷ್ ಸರ್ಕಾರ ‘ಇಂಡಿಯಾಸ್ ಫಸ್ಟ್ ಲೇಡಿ ಟೀಚರ್’ ಎಂದು ಬಿರುದು ಕೊಟ್ಟಿತು. 1897ರಲ್ಲಿ ಪ್ಲೇಗ್ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸಾವಿತ್ರಿಬಾಯಿ ಆ ಕಾಯಿಲೆ ಸೋಂಕಿಗೆ ಬಲಿಯಾಗಿ ತೀರಿಕೊಂಡರು.
ಮಹಿಳೆಯರು ಮತ್ತು ಶಿಕ್ಷಣದ ಬಗೆಗೆ ಸಾವಿತ್ರಿಬಾಯಿ ಫುಲೆ ತೋರಿದ ಕಾಳಜಿ, ಆ ನಿಟ್ಟಿನಲ್ಲಿ ಅವರು ಮಾಡಿದ ಕಾರ್ಯ ಇಂದಿಗೂ ಪ್ರೇರಣಾದಾಯಿ. ಅವರು ಹಾಕಿಕೊಟ್ಟ ಆದರ್ಶಗಳ ಹಾದಿಯಲ್ಲಿ ಸಾಗಲು ಯತ್ನಿಸಿದರೆ ಖಂಡಿತವಾಗಿಯೂ ಗುಣಮಟ್ಟ ಶಿಕ್ಷಣದ ಆಶಯ ಮತ್ತು ಮಹಿಳಾ ಸಬಲೀಕರಣದ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.
| ಗಿರಿಜಾಶಂಕರ್ ಜಿ.ಎಸ್.
(ಲೇಖಕರು ಕನ್ನಡ ಅಧ್ಯಾಪಕರು ಮತ್ತು ಹವ್ಯಾಸಿ ಬರಹಗಾರರು)