ನೋವಿನಲ್ಲೂ ಜೀವ ಉಳಿಸುವುದು ಮಹತ್ಕಾರ್ಯ; ಸಿಎಂ ಶ್ಲಾಘನೆ

IMG-20240301-WA0015
Published on

ಬೆಂಗಳೂರು: ತಮ್ಮವರನ್ನು ಕಳೆದುಕೊಂಡು ನೋವು ನುಂಗಿಕೊಂಡು, ಅಂಗಾಂಗ ದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವುದು ಮಹತ್ಕಾರ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ 7 ಕುಟುಂಬಗಳನ್ನು ಸನ್ಮಾನಿಸಿ, ಪ್ರಶಂಸಾಪತ್ರ ನೀಡಿ ಗೌರವಿಸಿದ ಸಿದ್ದರಾಮಯ್ಯ ಮಾತನಾಡಿ ಒಬ್ಬರ ಜೀವ ಹೋಗಿರುವ ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸುವ ಬಗ್ಗೆ ದಾನಿಗಳ ಕುಟುಂಬ ಯೋಚಿಸುವುದು ಸಾಮಾನ್ಯವಲ್ಲ ಎಂದು ಹೇಳಿದರು.

ಸಾರ್ಥಕ ಜೀವನಕ್ಕೆ ಒತ್ತು

ಜೀವಸಾರ್ಥಕತೆ ಅಡಿಯಲ್ಲಿ ಅಂಗಾಂಗ ದಾನಕ್ಕೆ ಆರೋಗ್ಯ ಇಲಾಖೆ ಒತ್ತು ನೀಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ನಿಟ್ಟಿನಲ್ಲಿ  ಅಂಗಾಂಗ ದಾನ ಹೆಚ್ಚಾಗಬೇಕು ಎಂದು ಶ್ರಮಿಸುತ್ತಿದ್ದಾರೆ. ದೇಶದಲ್ಲಿಯೇ ಕರ್ನಾಟಕ ಇಂದು ಅಂಗಾಂಗ ದಾನದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಅಂಗಾಂಗ ದಾನಿಗಳ ಯಾವುದೇ ತೊಂದರೆಗಳಾಗದಂತೆ ಸರ್ಕಾರ ಕೂಡ ನೋಡಿಕೊಳ್ಳಲಿದೆ. ಅಂಗಾಂಗ ದಾನಿಗಳ ಪರ ಸರ್ಕಾರ ನಿಲ್ಲಲಿದೆ. ಕುಟುಂಬದವರನ್ನು ಕಳೆದುಕೊಂಡ ದುಃಖದಲ್ಲಿ ಮತ್ತೊಬ್ಬರ ಜೀವ ಉಳಿಸಿ ಸಾರ್ಥಕತೆ ಮೆರೆದ ಕುಟುಂಬಗಳು ಮಾನವೀಯ ಮೌಲ್ಯ ಎತ್ತಿ ಹಿಡಿದಿವೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಆಯುಕ್ತ ಡಿ. ರಂದೀಪ್ ಮತ್ತು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಂಗಾಂಗ ದಾನಿಗಳ ಕುಟುಂಬದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net