

ಕೋಲಾರ: ಸಹಕಾರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಹಕಾರ ಸಂಸ್ಥೆಗಳು ನಷ್ಟವಾಗಿ ಸುಪರ್ ಸೀಡ್ ಆದರೆ ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಸಹಕಾರಿ ಯೂನಿಯನ್ ಅಧ್ಯಕ್ಷ ಪಾಕರಹಳ್ಳಿ ಪಿ.ಎಂ.ವೆಂಕಟೇಶಪ್ಪ ಹೇಳಿದರು.
ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಹಾಲು ಒಕ್ಕೂಟದ ಶಿಬಿರ ಕಚೇರಿಗಳ ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ವಿಸ್ತರಣಾಧಿಕಾರಿಗಳು ಮತ್ತು ಹಾಲು ಒಕ್ಕೂಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿಸ್ತರಣಾಧಿಕಾರಿಗಳು ಆಯಾ ತಿಂಗಳ ಜಮಾ, ಖರ್ಚು ತೆಗೆದುಕೊಂಡು, ನಷ್ಟದ ಸೊಸೈಟಿಯನ್ನು ಸರಿಪಡಿಸಬೇಕು. ಇಲ್ಲದೆ ಹೋದರೆ ರೈತರು ಮತ್ತು ಸೊಸೈಟಿಗಳಿಗೂ ನಷ್ಟ ಎಂದರು.
ಸಹಕಾರ ಮಹಾಮಂಡಳದ ಮಾಜಿ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಚುನಾವಣೆಗೆ ಸಂಬಂಸಿದಂತೆ ಇರುವ ಸಮಸ್ಯೆಗಳ ಬಗ್ಗೆ ಬಗೆಹರಿಸಿಕೊಳ್ಳಬೇಕು. ಒಕ್ಕೂಟದಿಂದ ಆಯೋಜಿಸುವ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಿದ್ದುಪಡಿಗಳ ಬಗ್ಗೆ ಅರಿವು ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎ.ಸಿ.ನಾಗರಾಜ್ ಮಾತನಾಡಿ, ಇತ್ತಿಚಿನ ಕಾನೂನು ತಿದ್ದುಪಡಿಗಳನ್ನು ತಿಳಿದುಕೊಳ್ಳುವುದರಿಂದ ಸಹಕಾರ ಸಂಘಗಳ ಚುನಾವಣೆ ನಡೆಸಲು ಅನಕೂಲವಾಗುತ್ತದೆ. ಇಂತಹ ಕಾರ್ಯಾಗಾರಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ನಿರ್ದೇಶಕರಾದ ಕೆ.ಎಂ.ಮAಜುನಾಥ್, ಪಿ.ಎನ್.ಕೃಷ್ಣಾರೆಡ್ಡಿ, ಕೆ.ಎಂ.ವೆಂಕಟೇಶಪ್ಪ, ಷೇಕ್ ಮಹ್ಮದ್, ಸಿಇಒ ಕೆ.ಎಂ.ಭಾರತಿ, ಲಕ್ಷ್ಮೀದೇವಮ್ಮ, ರವಿಕುಮಾರ್ ಇದ್ದರು.