ನಶಿಸುತ್ತಿರುವ ಕಲಾ ಪ್ರಕಾರ ಉಳಿಸಿ; ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ

ತುಮಕೂರಿನಲ್ಲಿ ಆಯೋಜಿಸಿದ್ದ ‘ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ-2023’ ಕಾರ್ಯಕ್ರಮಕ್ಕೆ ಜಗದೀಶ್ ಹಿರೇಮನಿ ಚಾಲನೆ ನೀಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ, ಡಾ.ಲಕ್ಷ್ಮಣದಾಸ್, ಶಿವಕುಮಾರ್ ಸಾಕೇಲ್, ಎ.ಆರ್.ಪುಟ್ಟಸ್ವಾಮಿ ಇದ್ದರು.
ತುಮಕೂರಿನಲ್ಲಿ ಆಯೋಜಿಸಿದ್ದ ‘ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ-2023’ ಕಾರ್ಯಕ್ರಮಕ್ಕೆ ಜಗದೀಶ್ ಹಿರೇಮನಿ ಚಾಲನೆ ನೀಡಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ, ಡಾ.ಲಕ್ಷ್ಮಣದಾಸ್, ಶಿವಕುಮಾರ್ ಸಾಕೇಲ್, ಎ.ಆರ್.ಪುಟ್ಟಸ್ವಾಮಿ ಇದ್ದರು.
Published on

ತುಮಕೂರು: ನಶಿಸಿ ಹೋಗುತ್ತಿರುವ ತಳ ಸಮುದಾಯದ ಕಲಾ ಪ್ರಕಾರಗಳನ್ನು ಗುರುತಿಸಿ ಅವುಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಬೇಕು ಎಂದು ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಮೂಲ ಸಂಸ್ಕೃತಿ, ಕನ್ನಡ ಸಂಸ್ಕೃತಿ-2023’ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಶಿಸಿ ಹೋಗುತ್ತಿರುವ ತಳಸಮುದಾಯಗಳ ಕಲಾ ಪ್ರಕಾರಗಳನ್ನ ಪುನರ್ ಜೀವನಗೊಳಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದೆ ಎಂದರು.

ಎಲ್ಲ ದೇಶಗಳನ್ನು ಅಲ್ಲಿನ ಸಂಸ್ಕೃತಿ ಮತ್ತು ಕಲೆಗಳ ಮೂಲಕ ಗುರುತಿಸಲಾಗುತ್ತದೆ. ಭಾರತದಲ್ಲಿ ಜಾನಪದ ಶೈಲಿಯ ಜೀವನ ಪದ್ಧತಿ, ಭಾಷಾ ಪದ್ಧತಿ, ವೈವಿಧ್ಯಮಯ ಆಹಾರ ಪದ್ಧತಿ, ವಿಭಿನ್ನವಾದ ಉಡುಗೆತೊಡುಗೆಗಳನ್ನು ಕಾಣಬಹುದು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವಿಭಿನ್ನವಾದ ಸಂಸ್ಕೃತಿ ಇರುತ್ತದೆ. ಆದರೆ ಎಲ್ಲರೂ ಆಚರಿಸುವುದು ಜಾನಪದ ಸಂಸ್ಕೃತಿಯಾಗಿದೆ ಎಂದರು.

ತಳ ಸಮುದಾಯಗಳಲ್ಲಿ, ಜನಪದದ ವಿಶಿಷ್ಟ ಕಲೆಗಳನ್ನು ವಾದ್ಯಗಳ ಮೂಲಕ ನುಡಿಸಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಹಾಗೂ ಅವರ ಮನಸ್ಸನ್ನು ಬದಲಾವಣೆ ಮಾಡುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

ಪ್ರಸ್ತುತ ದಿನಗಳ ಸಿನಿಮಾದಲ್ಲಿ ಬರುವ ಸಾಹಿತ್ಯದಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ, ಆದರೇ ಜನಪದ ಸಾಹಿತ್ಯದ 5 ನಿಮಿಷ ಹಾಡಿನಲ್ಲಿ ವ್ಯಕ್ತಿಯ ಜೀವನದ ಬದಲಾವಣೆ ಕುರಿತು ಹೇಳಲಾಗುತ್ತದೆ. ಈ ದೇಶದ ಮೂಲ ಆಸ್ಮಿತೆ ಎಂದರೆ ಅದು ಜನಪದ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ ಮಾತನಾಡುವುದಕ್ಕಿಂತ ಕಲೆಯನ್ನು ನಿಮ್ಮ ಮುಂದೆ ಪ್ರದರ್ಶಿಸುತ್ತೇನೆ ಎಂದು ಹೇಳಿ ತಮಟೆ ಕಲೆ ಪ್ರದರ್ಶಿಸಿದರು.

ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ನಿದೇರ್ಶಕ ಡಿ.ಎಂ.ರವಿಕುಮಾರ್, ಗಾಯಕ ಮಲ್ಲಿಕಾರ್ಜುನ, ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಅಶೋಕ್ ಎನ್.ಛಲವಾದಿ ಇದ್ದರು.

ಆಧುನಿಕ ದಿನಗಳಲ್ಲಿ ತಳಸಮುದಾಯದ ಕಲೆಗಳು ನಶಿಸಿ ಹೋಗುತ್ತಿರುವ ಪರಿಣಾಮ ಅವುಗಳನ್ನು ಮತ್ತೆ ಮುನ್ನೆಲೆಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಹಿಂದಿನ ವರ್ಷದ ಬಜೆಟ್‌ನಲ್ಲಿ ಈ ಕಾರ್ಯಕ್ರಮ ಘೋಷಣೆ ಮಾಡಿತ್ತು. ಪ್ರತಿ ಜಿಲ್ಲೆಯಿಂದ 10ಜನರ ತಂಡದ 5 ಕಲಾ ಪ್ರಕಾರಗಳನ್ನು ಗುರುತಿಸಿ, ನಶಿಸಿ ಹೋದಂತಹ ಕಲೆಗಳ ಕುರಿತು ತರಬೇತಿ ನೀಡಲಾಗಿದೆ. ಪ್ರತಿ ಜಿಲ್ಲೆಯಿಂದ 2 ತಂಡವನ್ನು ರಾಜ್ಯಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. |ಜಗದೀಶ್ ಹಿರೇಮನಿ ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಕಾರ್ಯಕ್ರಮದ ರಾಜ್ಯ ಸಂಚಾಲಕ ಮನುಷ್ಯನ ನಾಗರಿಕತೆ ಜತೆಗೆ ಸಂಸ್ಕೃತಿಯೂ ಬೆಳೆದುಕೊಂಡು ಬಂದಿದೆ. ಆಧುನಿಕತೆ ಬೆಳೆದಂತೆ ಕಲೆಗಳು ಕಣ್ಮರೆಯಾಗುತ್ತಿವೆ. ಶ್ರೀಮಂತ ಪರಂಪರೆಯನ್ನು ಹೊಂದಿರುವಂತಹ ಕಲೆಗಳನ್ನು ಉಳಿಸುವುದಕ್ಕಾಗಿ ತರಬೇತಿ ಪಡೆದು ಕಲಾವಿದರು ಕಲೆ ಮುಂದುವರಿಸಿಕೊಂಡು ಹೋಗಬೇಕು. ಬಲವಂತರಾವ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿದೇರ್ಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net