ಉಳಿತಾಯ ಮಾಡಿ ಆರ್ಥಿಕ ಸ್ವಾವಲಂಬಿಗಳಾಗಿ

HUN-JUNE-10-1(SBI PROGRAMME)
ಹುಣಸೂರು ನಗರದಲ್ಲಿ ಎಸ್‌ಬಿಐ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತವ ವಹಿವಾಟು ನಡೆಸಿದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ ಬಹುಮಾನ ವಿತರಿಸಿ, ಗೌರವಿಸಲಾಯಿತು. ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಪ್ರಫುಲ್‌ಕುಮಾರ್ ಜಿನಾ, ಎಜಿಎಂ ಅರುಣ್‌ಕುಮಾರ್ ಪಾಣಿಗ್ರಾಹಿ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್, ಮಹದೇವಸ್ವಾಮಿ, ರಾಮು ಇತರರಿದ್ದರು.
Published on

ಹುಣಸೂರು: ರೈತರು ಸಾಲ ಸೌಲಭ್ಯ ಪಡೆಯುವುದರ ಜತೆಗೆ ಸಣ್ಣಪುಟ್ಟ ಉಳಿತಾಯವನ್ನೂ ಮಾಡುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಎಸ್‌ಬಿಐ ಜನರಲ್ ಮ್ಯಾನೇಜರ್ ಪ್ರಫುಲ್ ಕುಮಾರ್ ಜಿನಾ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಎಸ್‌ಬಿಐ ಮೈಸೂರು ಉತ್ತರ ವಿಬಾಗದ ಆರ್‌ಬಿಒ-2 ಮತ್ತು ಹುಣಸೂರಿನ ಎಸ್‌ಬಿಐನ ಕೃಷಿ ಅಬಿವೃದ್ಧಿ ಶಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕೃಷಿ ರೀವ್ ಜಾಗೃತ ಶಿಬಿರ (ಕೃಷಿ ಸಾಲ ಅರಿವು ವಾರ)ವನ್ನು ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕ್ ವತಿಯಿಂದ ಒಂದು ವಾರ(ಜೂ.9ರಿಂದ 15ರವರೆಗೆ) ದೇಶಾದ್ಯಂತ ರೈತರಿಗೆ ಬ್ಯಾಂಕ್ ವತಿಯಿಂದ ರೈತರಿಗೆ ಮತ್ತು ಗ್ರಾಹಕರಿಗೆ ಸಿಗುತ್ತಿರುವ ವಿವಿಧ ರೀತಿಯ ಸಾಲ ಸೌಲಭ್ಯಗಳು, ಸರ್ಕಾರ ಪ್ರಾಯೋಜಿತ ವಿಮಾ ಯೋಜನೆಗಳು, ಮಾಸಾಶನ ಯೋಜನೆಗಳು, ಬೆಳೆಸಾಲ, ಮನೆಸಾಲ ಇನ್ನಿತರ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಲಾಗಿದೆ. ದೇಶಾದ್ಯಂತ 22,800 ಶಾಖೆಗಳಲ್ಲಿ ಈ ಕಾರ್ಯ ಪ್ರಗತಿಯಲ್ಲಿದೆ. ರೈತರು ಬ್ಯಾಂಕ್‌ಗಳನ್ನು ಕೇವಲ ಸಾಲಸೌಲಭ್ಯ ಪಡೆಯಲು ಮಾತ್ರ ಬಳಸಬಾರದು. ಬದಲಾಗಿ ಪಡೆದ ಸಾಲದಿಂದ ಗಳಿಸಿದ ಲಾಭದ ಕೆಲ ಲಾಭಾಂಶವನ್ನು ಬ್ಯಾಂಕ್‌ನಲ್ಲೇ ಠೇವಣಿ ಖಾತೆ ಅಥವಾ ಉಳಿತಾಯ ಖಾತೆಗಳ ಮೂಲಕ ಉಳಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಕೂಡಿಟ್ಟ ಹಣ ನಿಮ್ಮ ಕಷ್ಟ ಕಾಲದಲ್ಲಿ ಆಗುತ್ತದೆ. ಅದರಿಂದ ದೇಶದ ಆರ್ಥಿಕ ಪ್ರಗತಿಯೂ ಸಾಧ್ಯವಾಗಲಿದೆ ಎಂದರು.

ಸಹಾಯಕ ಜನರಲ್ ಮ್ಯಾನೇಜರ್ ಅರುಣ್‌ಕುಮಾರ್ ಪಾಣಿಗ್ರಾಹಿ ಮಾತನಾಡಿ, ಎಸ್‌ಬಿಐ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಆಗಿದೆ. ರೈತರು ಬ್ಯಾಂಕಿನ ನೀತಿ ನಿಯಮಗಳ ಕುರಿತು, ಸ್ಥಳೀಯ ಸಮಸ್ಯೆಗಳ ಕುರಿತು ವಿಚಾರವಿದ್ದರೆ ಹಿರಿಯ ಅಧಿಕಾರಿಗಳ ಬಳಿ ತಿಳಿಸಿದಲ್ಲಿ ಸಕಾರಾತ್ಮಕ ಚಿಂತನೆಯೊಂದಿಗೆ ಬಗೆಹರಿಸಲಾಗುವುದು ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಬ್ಯಾಂಕ್‌ಗಳು ರೈತರ ನೆರವಿಗೆ ಅನುಕೂಲವಾಗುವಂತೆ ಸಾಲಸೌಲಭ್ಯ ನೀಡುತ್ತಿರುವುದು ಸರಿಯಷ್ಟೇ. ಆದರೆ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದಾಗ ರೈತ ಸಾಲಗಾರನಾಗುತ್ತಾನೆ. ಇದಕ್ಕೆ ಸರ್ಕಾರಗಳೇ ನೇರ ಹೊಣೆಯಾಗಿದೆ. ಸಾಲ ಮಂಜೂರು ಮಾಡುವ ವೇಳೆ ಪ್ರತಿಯೊಂದಕ್ಕೂ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಹಿರಿಯ ಅದಿಕಾರಿಗಳ ಅನುಮತಿ ಪಡೆಯಬೇಕಿದೆ. ಬದಲಾಗಿ ನಿರ್ಧಿಷ್ಟ ಪ್ರಮಾಣದಲ್ಲಿ ಸಾಲ ಸೌಲಭ್ಯ ನೀಡುವ ಹಕ್ಕನ್ನು ಶಾಖಾಧಿಕಾರಿಗೆ ಬ್ಯಾಂಕ್‌ನ ಆಡಳಿತ ಮಂಡಳಿ ನೀಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ, ಹುಣಸೂರು ನಗರದಲ್ಲಿರುವ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಮಾತನಾಡಿದರು.

ಬ್ಯಾಂಕ್‌ನ ದಶಕಗಳ ಗ್ರಾಹಕರಾದ ಪಿ.ಎಂ.ರಾಮು, ಉಂಡುವಾಡಿ ಸಿ.ಚಂದ್ರೇಗೌಡ ಮುಂತಾದ ರೈತರು ಬ್ಯಾಂಕಿನೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಇದೇ ವೇಳೆ ಸಾಲ ಮಂಜೂರಾದ ರೈತರಿಗೆ ಮಂಜೂರಾತಿ ಪತ್ರಗಳು, ಉತ್ತಮ ವಹಿವಾಟು ನಡೆಸುತ್ತಿರುವ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ, ಗ್ರಾಹಕರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಎಜಿಎಂ ಮಹದೇವಸ್ವಾಮಿ ಮತ್ತು ಅಧಿಕಾರಿ ಸುನೀತಾ ವಿವಿಧ ಸಾಲಸೌಲಭ್ಯಗಳ ಕುರಿತು ಮಾಹಿತಿ ಒದಗಿಸಿದರು. ಎಸ್‌ಬಿಎಂ ಎಡಿಬಿ ಹುಣಸೂರು ಶಾಖೆಯ ವ್ಯವಸ್ಥಾಪಕ ಅನಿಲ್, ರೈತ ಮುಖಂಡರಾದ ಅಗ್ರಹಾರ ರಾಮೇಗೌಡ, ವಿಷಕಂಠಪ್ಪ, ಮೋದೂರು ಶಿವಣ್ಣ, ಸುರೇಶ್ ಸೇರಿದಂತೆ ರೈತರು, ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net