

ಬೆಂಗಳೂರು: ಧರ್ಮಸ್ಥಳ ನಿವಾಸಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದ ಹಿನ್ನಲೆ ರಾಜ್ಯ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸೇರಿ 16 ಜನರನ್ನು ಒಳಗೊಂಡಿದ್ದ ಎಸ್ಐಟಿಯನ್ನು ರಚನೆ ಮಾಡಿತ್ತು.
ಆದರೆ, ಈಗ ಈ ಪ್ರಕರಣ ತನಿಖಾ ತಂಡದಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೆಂಕಟೇಶ್ ಪ್ರಸನ್ನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಲಿಖಿತ ಪತ್ರವೊಂದನ್ನು ನೀಡಿದ್ದಾರೆಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಅಂಗೀಕರಿಸಿದ ರಾಜ್ಯ ಸರ್ಕಾರ, ಹುಬ್ಬಳ್ಳಿ-ಧಾರವಾಡದ ಮಾಜಿ ಕಮೀಷನರ್ ಆಗಿದ್ದ ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ಪಡೆಯೊಂದನ್ನು ರಚಿಸಿತ್ತು. ಈ ತಂಡದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೆಂಕಟೇಶ್ ಪ್ರಸನ್ನ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತವಾರ್ತೆ ಎಸ್ಪಿ ನಿಶಾ ಜೇಮ್ಸ್, ಸಿಐಡಿ ಎಸ್ಪಿ ಲೋಕೇಶ್ ಜಗಲಸಾರ್ ಈ ತಂಡದ ಪ್ರಮುಖ ಸದಸ್ಯರಾಗಿದ್ದರು.
ಆದರೆ, ಸರ್ಕಾರ ರಚಿಸಿರುವ ಎಸ್ಐಟಿ ಹಾಗೂ ಅಲ್ಲಿರುವ ಅಧಿಕಾರಿಗಳ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಹಾಗು ಕೆಲ ಸಾಮಾಜಿಕ ಹೋರಾಟಗಾರರು ವಿರೋಧ ವ್ಯಕ್ತ ಪಡಿಸಿದ್ದರು. ಕುಟುಂಬ ವರ್ಗದಿಂದ ಎಸ್ಐಟಿ ಮೇಲೆ ಅವಿಶ್ವಾಸ ಮೂಡಿರುವ ಹಿನ್ನಲೆ ತಂಡದಲ್ಲಿ ಮುಂದುವರಿಯಲು ವೆಂಕಟೇಶ್ ಪ್ರಸನ್ನ ಅವರಿಗೆ ನೈತಿಕ ಪ್ರಶ್ನೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ತಮ್ಮನ್ನು ತನಿಖಾ ತಂಡದಿಂದ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ತನ್ನ ಮಗಳ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆದಿಲ್ಲ ಎಂದು ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಪ್ರಕರಣದ ಮರು ತನಿಖೆ ನಡೆಸುವಂತೆ ಆದೇಶಿಸಿತ್ತು.
ಈ ಪ್ರಕರಣವನ್ನು ಕರ್ನಾಟಕದ ಸಿಐಡಿ ಹಾಗೂ ಕೇಂದ್ರದ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರೂ ಸಹ ಅಪರಾಧಿಗಳನ್ನು ಕಂಡು ಹಿಡಿಯುವುದರಲ್ಲಿ ಸಫಲರಾಗಿರಲಿಲ್ಲ. ಆದ್ದರಿಂದ ಕುಸುಮಾವತಿ ತನ್ನ ಮಗಳ ಸಾವಿಗೆ ನ್ಯಾಯ ದೊರೆತಿಲ್ಲವೆಂದು ಮರು ತನಿಖೆಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಸಮ್ಮತಿಸಿರುವ ಸುಪ್ರೀಂ ಕೋರ್ಟ್ ಮೂರು ತಿಂಗಳಲ್ಲಿ ತನಿಖೆ ಪೂರೈಸಿ, ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಆದರೆ, ಈಗ ಎಸ್ಐಟಿ ರಚನೆ ಬೆನ್ನಲ್ಲೆ ಸಮಸ್ಯೆಗಳು ಪ್ರಾರಂಭವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ ಸುಪ್ರೀಂ ಕೋರ್ಟ್ ಮೂರು ತಿಂಗಳಲ್ಲಿ ತನಿಖೆ ಪೂರೈಸಿ ವರದಿ ಸಲ್ಲಿಸಬೇಕೆಂದು ಸ್ಪಷ್ಟ ನಿರ್ದೇಶನ ನೀಡಿರುವ ಕಾರಣ, ತನಿಖೆ ಹೇಗೆ? ಯಾರಿಂದ ? ನಡೆದು ವರದಿ ಏನು ಹೇಳಲಿದೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಿದೆ, (ಏಜೆನ್ಸೀಸ್).