ಸೌದಿ ಅರೇಬಿಯಾ ಕಾರ್ವಿುಕ ಕಾನೂನು ಸಡಿಲ

Soudi
Published on

ದುಬೈ: ವಲಸೆ ಕಾರ್ವಿುಕರ ಶೋಷಣೆ ತಪ್ಪಿಸಲು ಅನುಕೂಲವಾಗುವಂತೆ ಕಾರ್ವಿುಕ ಕಾನೂನುಗಳನ್ನು ಸುಧಾರಣೆ ಮಾಡುವುದಾಗಿ ಸೌದಿ ಅರೇಬಿಯಾ ಬುಧವಾರ ಪ್ರಕಟಿಸಿದೆ. ಹೀನಾಯ ವಾತಾವರಣದಲ್ಲಿ ನರಳಿ ಉದ್ಯೋಗದಾತರ ಶೋಷಣೆಗೆ ಒಳಗಾಗುವ ಭಾರತ ಸಹಿತ ವಿವಿಧ ದೇಶಗಳ ಕೋಟ್ಯಂತರ ಕಾರ್ವಿುಕರಿಗೆ ಇನ್ನು ನಿರಾಳತೆ ಸಿಗಲಿದೆ. ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಸುಧಾರಣೆ ಕ್ರಮಗಳನ್ನು ಪ್ರಕಟಿಸಿದ್ದು, ಸೌದಿಯ ಉದ್ಯೋಗ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗುವ ಸಂಭವವಿದೆ.

ಯಾವುದೇ ನೌಕರ ತನ್ನ ಉದ್ಯೋಗದಾತ ಪ್ರಾಯೋಜಕರನ್ನು ಬದಲಾಯಿಸಿ, ಬೇರೆ ನೌಕರಿಗೆ ಸೇರಲು ಇದು ಅವಕಾಶ ಕಲ್ಪಿಸಲಿದೆ. ಉದ್ಯೋಗ ಬಿಡಲು, ದೇಶದೊಳಗೆ ಮತ್ತೆ ಪ್ರವೇಶಿಸಲು ಹಾಗೂ ಉದ್ಯೋಗದಾತರ ಅನುಮತಿಯಿಲ್ಲದೆ ದೇಶವನ್ನು ಬಿಡಲು ಅಗತ್ಯವಾದ ವೀಸಾ ಪಡೆಯಲೂ ಅವಕಾಶ ನೀಡಲಿದೆ. ‘ಕಾರ್ವಿುಕ ಸಂಬಂಧ ಉಪಕ್ರಮ’ ಎಂಬ ಈ ಸುಧಾರಣೆ 2021ರ ಮಾರ್ಚ್​ನಿಂದ ಅನುಷ್ಠಾನಗೊಳ್ಳಲಿದೆ ಎಂದು ಉಪ ಸಚಿವ ಅಬ್ದುಲ್ಲಾ ಬಿನ್ ನಾಸೆರ್ ತಿಳಿಸಿದ್ದಾರೆ. ಸೌದಿಯಲ್ಲಿ ಸುಮಾರು ಒಂದು ಕೋಟಿ ವಿದೇಶಿ ಕಾರ್ವಿುಕರು ಇದ್ದಾರೆ ಎನ್ನಲಾಗಿದೆ.

ಕಫಲಾ ಪ್ರಾಯೋಜಕತ್ವ ಪದ್ಧತಿ

ಕೊಲ್ಲಿಯ ಅನೇಕ ದೇಶಗಳಲ್ಲಿ ‘ಕಫಲಾ’ ಎಂಬ ಪ್ರಾಯೋಜಕತ್ವ ವ್ಯವಸ್ಥೆಯಿದೆ. ಅದರನ್ವಯ ವಿದೇಶಿ ಕಾರ್ವಿುಕರು ಅಂಥ ಪ್ರಾಯೋಜಕತ್ವದ ಉದ್ಯೋಗದಾತರಿಗೆ ಕಾನೂನು ಬದ್ಧವಾಗಿ ಅಧೀನವಾಗಿರಬೇಕಾಗುತ್ತದೆ. ಸೌದಿ ಅರೇಬಿಯಾ ಈ ವ್ಯವಸ್ಥೆಯ ಕೆಲವು ಅಂಶಗಳನ್ನು ತೆಗೆದು ಹಾಕುವ ಸೂಚನೆ ನೀಡಿದೆ ಎಂದು ಮಾನವ ಹಕ್ಕುಗಳ ಸಂಘಟನೆಯಾದ ಹ್ಯೂಮನ್ ರೈಟ್ಸ್ ವಾಚ್​ನ ಸಂಶೋಧಕಿ ರೋಥ್ನಾ ಬೇಗಂ ಹೇಳಿದ್ದಾರೆ. ಅರಬ್ಬಿಯಲ್ಲಿ ಕಫೀಲ್ ಎಂದರೆ ಪ್ರಾಯೋಜಕ. ಕಾರ್ವಿುಕರ ಕೆಲಸ ಹಾಗೂ ವಾಸ್ತವ್ಯದ ಸ್ಥಿತಿಗತಿಯನ್ನು ಈ ಕಫೀಲರು ನಿಯಂತ್ರಿಸುತ್ತಾರೆ. 2022ರ ಫಿಪಾ ವಿಶ್ವಕಪ್ ಪ್ರಾಯೋಜಿಸಲಿರುವ ಕತಾರ್ ಕೂಡ ಇದೇ ರೀತಿಯ ಕಾರ್ವಿುಕ ಸುಧಾರಣೆಗಳನ್ನು ಇತ್ತೀಚೆಗೆ ಪ್ರಕಟಿಸಿತ್ತು.

ವಿಷನ್ 2030

ದೇಶಕ್ಕೆ ಹೆಚ್ಚು ವಿದೇಶಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ರಾಜಕುಮಾರ ಮಹಮದ್ ಬಿನ್ ಸಲ್ಮಾನ್ ಈಚೆಗೆ ಘೋಷಿಸಿದ್ದ ವಿಷನ್ 2030 ಯೋಜನೆಯ ಅಂಗವಾಗಿ ಈ ಸುಧಾರಣೆ ತರಲಾಗುತ್ತಿದೆ. ಖಾಸಗಿ ಕ್ಷೇತ್ರದ ವಿಸ್ತರಣೆ ಹಾಗೂ ಕೇವಲ ತೈಲ ಆಧರಿತ ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸುವುದು ಕೂಡ ವಿಷನ್ 2030 ಗುರಿಯಾಗಿದೆ.

ನಲವತ್ತೊಂದು ಲಕ್ಷ ಭಾರತೀಯರು

ಸೌದಿ ಅರೇಬಿಯಾದಲ್ಲಿ ಸುಮಾರು 41 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇದು ಸೌದಿಯ ಒಟ್ಟು ಜನಸಂಖ್ಯೆಯ ಶೇ. 13ರಷ್ಟಾಗುತ್ತದೆ. ಇವರಲ್ಲಿ ಬಹುತೇಕರು ಕಾರ್ವಿುಕರಾಗಿದ್ದಾರೆ.

ಪರಿಸ್ಥಿತಿ ಸುಧಾರಣೆ

ವಲಸೆ ಕಾರ್ವಿುಕರ ಸ್ಥಿತಿಯಲ್ಲಿ ಸುಧಾರಣೆ ತರಲು ಇದು ನೆರವಾಗಲಿವೆ ಎಂದು ಬೇಗಂ ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಇದು ಕಫಲಾ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಸೌದಿ ಅರೇಬಿಯಾದ ಕಫಲಾ ವ್ಯವಸ್ಥೆಯನ್ವಯ ಕಾರ್ವಿುಕರ ಮೇಲೆ ಉದ್ಯೋಗದಾತರು ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಕಾರ್ವಿುಕರು ದೇಶದಿಂದ ಹೊರ ಹೋಗಲು ಅಥವಾ ಉದ್ಯೋಗ ಬದಲಾವಣೆ ಮಾಡಲು ಪ್ರಾಯೋಜಕರ ಅನುಮತಿ ಅಗತ್ಯ. ಕಾರ್ವಿುಕರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಿ ತೀವ್ರ ಶೋಷಣೆಗೆ ತುತ್ತಾಗುತ್ತಿದ್ದಾರೆ. ಮಾಲೀಕರು ಕಾರ್ವಿುಕರ ಪಾಸ್​ಪೋರ್ಟ್ ಗಳನ್ನು ಇಟ್ಟುಕೊಂಡು ಅವರಿಂದ ಹೆಚ್ಚುವರಿ ಕೆಲಸ ಮಾಡಿಸಿಕೊಳ್ಳುವುದು ಹಾಗೂ ವೇತನ ನೀಡದಿರುವುದು ಮುಂತಾದ ಶೋಷಣೆಗಳನ್ನು ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net