

‘ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ವೇಹತ್ವಂ, ನಿರ್ವೇಹತ್ವೇ ನಿಶ್ಚಲತತ್ತ್ವಂ, ನಿಶ್ಚಲತತ್ತ್ವೇ ಜೀವನ್ಮುಕ್ತಿಃ.’ ನಮ್ಮ ಮನಸ್ಸಿನ ವೃತ್ತಿಗಳೇ ಮನಸ್ಸು. ಆದ್ದರಿಂದ ನಮ್ಮ ಮನಸ್ಸನ್ನು ನಾವು ಶುದ್ಧಿಗೊಳಿಸಬೇಕಾದರೆ ನಮ್ಮ ಮನಸ್ಸಿನ ವೃತ್ತಿಗಳನ್ನು ತಿದ್ದಬೇಕು. ಅದಕ್ಕೆ ನಾವು ಸತ್ಸಂಗದತ್ತ ಸಾಗಬೇಕು. ಸತ್ಸಂಗದಲ್ಲಿ ಮನಸ್ಸು ಲೀನವಾದಾಗ ವಿಷಯಗಳ ಜೊತೆ ನಮಗೆ ನಿಸ್ಸಂಗವಾಗುತ್ತದೆ. ಆಗ ತಾನಾಗಿಯೇ ಆ ವಿಷಯಗಳ ಮೋಹ ನಮಗಿಲ್ಲವಾಗುತ್ತದೆ.
ಸತ್ಸಂಗದಿಂದ ನಿಶ್ಚಲವಾದ ಜ್ಞಾನ ನಮಗಾಗುತ್ತದೆ. ಇದೇ ನಮ್ಮ ಅಹಂಕಾರದಿಂದ ದೂರವಾಗಲು ನಮಗೆ ಸಹಾಯವಾಗುವ ಸಾಧನೆ. ತತ್ತ್ವವನ್ನು ತಿಳಿದಮೇಲೆ ನಮಗೆ ಜೀವನವು ಪರಮಾತ್ಮನ ಲೀಲೆಯೆಂದು ಗೋಚರವಾಗುತ್ತದೆ. ನನ್ನ ದುಃಖಕ್ಕೆ ಇತರರು ಕಾರಣರಲ್ಲ ಎಂಬುದು ಸ್ಪಷ್ಟವಾಗುತ್ತದೆ, ಇದನ್ನೇ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯ ಆರನೇ ಅಧ್ಯಾಯದಲ್ಲಿ ‘ನಾವು ನಮ್ಮನ್ನು ಉದ್ಧಾರಮಾಡಿಕೊಳ್ಳಬೇಕು’ ಎಂದಿದ್ದಾನೆ.
ಎಂದರೆ ಸತ್ಸಂಗದತ್ತ ನಮ್ಮ ಮನಸ್ಸು ನಡೆಯಬೇಕು. ಇಲ್ಲದಿದ್ದರೆ ವಿಷಯಗಳತ್ತ ನಮ್ಮ ಮನಸ್ಸು ಸಾಗಿ ನಮ್ಮ ಜೀವನ ದುಃಖಮಯವಾಗುವಂತೆ ಮಾಡು ತ್ತದೆ. ಆದ್ದರಿಂದ ನಮ್ಮ ಮನಸ್ಸೇ ನಮ್ಮ ಮಿತ್ರ. ನಮ್ಮ ಮನಸ್ಸೇ ನಮ್ಮ ಶತ್ರು. ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಾಗ ನಮಗೆ ನಮ್ಮ ಮನಸ್ಸು ಮಿತ್ರ. ಇದಕ್ಕೆ ವಿಪರೀತವಾದಾಗ ಅದೇ ಶತ್ರುವಾಗುತ್ತದೆ. ಆದ್ದರಿಂದ ವಿಷಯಗಳತ್ತ ಹೋಗುವ ಮನಸ್ಸನ್ನು ಹಿಡಿಯಬೇಕು. ಇಲ್ಲವಾದಲ್ಲಿ ಡಿ.ವಿ.ಜಿ.ಯವರು ಹೇಳುವಂತಾಗುತ್ತದೆ ನಮ್ಮ ಪಾಡು.
ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ
ಲೋಕವತ್ತಿಯು ನಯವದಾತ್ಮ ನೀತಿಯದು|
ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ
ವ್ಯಾಕುಲತೆ ತಪ್ಪೀತೆ - ಮರುಳ ಮುನಿಯ || 795 ||