

ನವದೆಹಲಿ: ಹರಿಯಾಣ ರಾಜ್ಯದ ಗುರುಗ್ರಾಮ ನಗರದಲ್ಲಿ ಗುರಗಾಂವ್ ಕನ್ನಡ ಸಂಘದ ವತಿಯಿಂದ 19ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ನಗರದ ವೈಶ್ಯ ಸಮಾಜ ಧರ್ಮಶಾಲ ಸೆಕ್ಟರ್ 04ನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಗುರಗಾಂವ್ ಕನ್ನಡ ಸಂಘವು ಗುರು ಹಿರಿಯರ ಮಾರ್ಗದರ್ಶನದಲ್ಲಿ ಕಳೆದ 19 ವರ್ಷಗಳಿಂದ ಭಕ್ತಿ, ಶ್ರದ್ಧೆಯಿಂದ ಆಚರಿಸಿಕೊಂಡು ಬರುತ್ತಿದೆ. ಈ ಸಲ ಈ ಪೂಜೆಯನ್ನು ಆ. 20ರಂದು ಹಮ್ಮಿಕೊಳ್ಳಲಾಗಿತ್ತು.
ಭಾನುವಾರದ ಪೂಜಾ ಕಾರ್ಯಕ್ರಮದಲ್ಲಿ ಸುಮಾರು 500 ಮಂದಿ ಪಾಲ್ಗೊಂಡಿದ್ದರು. ದೆಹಲಿ, ಭಿವಾಡಿ, ಫರಿದಾಬಾದ್ ಮತ್ತು ನೋಯಿಡಾ ನಗರಗಳಿಂದ ಕನ್ನಡ ಭಕ್ತಾದಿಗಳು ಅಗಮಿಸಿದ್ದರು. ಬೆಳಗ್ಗೆ 10:30ಕ್ಕೆ ವಿನಯ್ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯು ಸಾಯಿಪ್ರಸಾದ್ ಹೇರಂಜಾಲ್ ದಂಪತಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವುದರ ಮೂಲಕ ಆರಂಭಗೊಂಡಿತ್ತು.
ವಿನಯ್ ಭಟ್ ಅವರು ಶ್ರೀ ಸತ್ಯನಾರಾಯಣ ವ್ರತ ಕಲ್ಪಿತ ಪೂಜೆ, ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಕಥೆ, ನೈವೇದ್ಯ, ಮಹಾ ಮಂಗಳಾರತಿ ಪೂಜೆಗಳನ್ನು ನೆರವೇರಿಸಿದರು.
ಈ ಮಧ್ಯೆ ಗುರಗಾಂವ್ ಕನ್ನಡ ಸಂಘದ ಅಧ್ಯಕ್ಷ ಎಂ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಜೋಳದರಾಶಿ ಹಾಗೂ ಸಾಬು ದರ್ಗಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ ಹರಿಯಾಣ ಬಿಜೆಪಿ ಮುಖಂಡ, ಪರಿಸರ ಪ್ರೇಮಿ ನವಿನ್ ಗೋಯಲ್ ಅವರಿಗೆ ಹೂ ಗೂಚ್ಛ ಶಾಲು ಹಾಗು ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಭಾರತ ಬಹು ಸಂಸ್ಕ್ರತಿಯ ದೇಶವಾಗಿದ್ದು, ಸಂಸ್ಕೃತಿ ವಿನಿಮಯ ಆಗುವುದರಿಂದ ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ. ಹೀರೋ, ಹೊಂಡ, ಮಾರುತಿ ಸುಜುಕಿ ಕಂಪನಿಗಳಿಂದ ಸಾವಿರಾರು ಇತರ ರಾಜ್ಯಗಳ ಜನರು ಇಲ್ಲಿಗೆ ಬಂದು ಸಂಸ್ಕೃತಿಯ ಜೊತೆಗೆ ಆರ್ಥಿಕವಾಗಿ ಹರಿಯಾಣ ರಾಜ್ಯವನ್ನು ಸದೃಢವಾಗಿ ಮಾಡಿದ್ದಾರೆ ಎಂದು ನವೀನ್ ಗೋಯಲ್ ಹೇಳಿದರು.
ಪೂಜೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಸುಮಾರು 500 ಕನ್ನಡಿಗರು ಒಂದು ಹಾಲ್ನಲ್ಲಿ ಒಟ್ಟಿಗೆ ಕುಳಿತುಕೊಂಡು ಊಟ ಮಾಡುವ ಮೂಲಕ ಕರುನಾಡು ಹಬ್ಬದ ವಾತಾವರಣವನ್ನು ಮೂಡಿಸಿದರು.
ಈ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಅನ್ನಸಂತರ್ಪಣೆಗೆ ಸಾಯಿಪ್ರಸಾದ್ ಹೇರಂಜಾಲ್ ದಂಪತಿ ಆರ್ಥಿಕ ಸಹಾಯ ಒದಗಿಸಿದ್ದರು. ಪ್ರಸಾದ ಹಾಗೂ ಇನ್ನಿತರ ಕಾರ್ಯಗಳಿಗೆ ವಿ.ವಿ.ಎಸ್. ಶರ್ಮಾ, ಡಿ.ವಿ.ಎಸ್. ಮೂರ್ತಿ, ವಿಠ್ಠಲ ಬೆಳಗಿ, ಗಣೇಶ ಶಿವಶಂಕರಮೂರ್ತಿ, ಕೆ.ಎಸ್.ಮೂರ್ತಿ, ಆನಂದ ಶಂಕರ ಸರದ, ಲಕ್ಷ್ಮೀಕಾಂತ್ ಮೋರೆ ಗೌಡ ಮತ್ತಿತರರು ಧನಸಹಾಯ ಮಾಡಿದ್ದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ್, ಸಮಿತಿ ಸದಸ್ಯರು, ದೆಹಲಿ ಕನ್ನಡ ಶಾಲೆಯ ಅಧ್ಯಕ್ಷ ಬಿ.ಕೆ.ಬಸವರಾಜ, ಭಿವಾಡಿ ಕನ್ನಡ ಬಳಗದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮತ್ತು ತಂಡದವರ ಸಹಕಾರವೂ ಈ ಕಾರ್ಯಕ್ರಮಕ್ಕಿತ್ತು.