

ನವದೆಹಲಿ: ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿ 2017ರಲ್ಲಿ ಭೂಭಾಗ ಅತಿಕ್ರಮಣಕ್ಕೆ ಯತ್ನಿಸಿದ್ದ ಚೀನಾ, ಮೂರು ವರ್ಷಗಳ ನಂತರ ಮತ್ತೆ ಕ್ಯಾತೆ ತೆಗೆದಿದೆ. ವಿವಾದಿತ ಡೋಕ್ಲಾಮ್ ಪ್ರಸ್ಥಭೂಮಿಯ ಪೂರ್ವ ಭಾಗದಲ್ಲಿನ ಭೂತಾನ್ನ
ಎರಡು ಕಿಲೋ ಮೀಟರ್ ಪ್ರದೇಶದೊಳಗೆ ಹಳ್ಳಿಯೊಂದನ್ನು ಸೃಷ್ಟಿಸಿದೆ. ಅದೇ ಪ್ರದೇಶದಲ್ಲಿ ಭೂತಾನ್ನ ಸುಮಾರು ಒಂಬತ್ತು ಕಿಲೋ ಮೀಟರ್ ಒಳಗೆ ರಸ್ತೆಯೊಂದನ್ನು ನಿರ್ವಿುಸಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ.
2017ರಲ್ಲಿ ಜೊಂಪೇಲ್ರಿ ದಿಣ್ಣೆ (ರಿಜ್) ವಶಪಡಿಸಿಕೊಳ್ಳಲು ಚೀನಿ ಪಡೆಗಳು ಪ್ರಯತ್ನಿಸಿದ್ದವು. ಅದನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಈಗ ನಿರ್ವಿುಸಿರುವ ರಸ್ತೆ, ಅದೇ ಜೊಂಪೇಲ್ರಿ ದಿಣ್ಣೆಯತ್ತ ಸಾಗಲು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ ಎನ್ನಲಾಗಿದೆ. ಡೋಕ್ಲಾಮ್ ಬಿಕ್ಕಟ್ಟು ಭಾರತ ಮತ್ತು ಚೀನಾ ನಡುವಿನ ಬಾಂಧವ್ಯವನ್ನು ಹದಗೆಡಿಸಿತ್ತು. ಈಗ ಪೂರ್ವ ಲಡಾಖ್ನಲ್ಲಿ ಚೀನಾ ಗಡಿ ಕ್ಯಾತೆ ತೆಗೆದಿರುವುದರಿಂದ ಉದ್ವಿಗ್ನತೆ ಸೃಷ್ಟಿಯಾಗಿದೆ.
ಏನಾಗಿತ್ತು?
2017ರಲ್ಲಿ ಚೀನಾದ ಕಾರ್ವಿುಕರು ಡೋಕ್ಲಾಮ್ಲ್ಲಿ ದಿಣ್ಣೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ ಸಂಘರ್ಷ ಉಂಟಾಗಿತ್ತು. ಸಿಕ್ಕಿಂ ಮತ್ತು ಡೋಕಲಾ ನಡುವಣ ಗಡಿಯಲ್ಲಿರುವ ಡೋಕಲಾ ಪ್ರದೇಶದಲ್ಲಿನ ಭಾರತೀಯ ಸೇನಾ ಪೋಸ್ಟ್ ಬಳಿಯ ಮಾರ್ಗದವರೆಗೆ ತಮ್ಮ ಮಾರ್ಗವನ್ನು ವಿಸ್ತರಿಸಲು ಚೀನಾ ಕಾರ್ವಿುಕರು ಮುಂದಾಗಿದ್ದರು. ಚೀನಿ ಕಾರ್ವಿುಕರನ್ನು ಭಾರತದ ಸೈನಿಕರು ದೈಹಿಕವಾಗಿ ತಡೆದಿದ್ದರು. ಜೋಂಪೆಲ್ರಿ ದಿಣ್ಣೆಯನ್ನು ವಶಪಡಿಸಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಿದರೆ ಭಾರತದ ಉಳಿದ ಭಾಗಗಳೊಂದಿಗೆ ಈಶಾನ್ಯ ಭಾರತವನ್ನು ಸಂರ್ಪಸುವ ಮಹತ್ವದ ‘ಚಿಕನ್ಸ್ ನೆಕ್’ ಪ್ರದೇಶವನ್ನು ಸ್ಪಷ್ಟವಾಗಿ ಕಾಣಲು ಚೀನಿ ಪಡೆಗಳಿಗೆ ಸಾಧ್ಯವಾಗುತ್ತದೆ. ಆದ್ದರಿಂದ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂಬುದು ಭಾರತದ ವಾದವಾಗಿದೆ. ಡೋಕ್ಲಾಮ್ ಸಂಘರ್ಷ ಎರಡು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ 2018 ಏಪ್ರಿಲ್ನಲ್ಲಿ ವುಹಾನ್ನಲ್ಲಿ ಭೇಟಿಯಾದ ವೇಳೆ ಬಿಕ್ಕಟ್ಟು ಕೊನೆಗೊಂಡಿತು.