ಸರ್ವ ಜ್ಞಾನ ಪ್ರವರ್ತಕ ವರುಣ

Varuna 31 Dec 19
Published on
ರಕ್ಷಕನೂ ಭಕ್ಷಕನೂ ಆಗಬಲ್ಲ ವರುಣನ ಮಹಿಮೆಯನ್ನು ಎಷ್ಟು ಹೇಳಿದರೂ ಕಡಿಮೆಯೇ. ಇಂತಹ ವರುಣನನ್ನು ಸ್ತೋತ್ರ ಮಾಡಿರುವ ವೈದಿಕ ಋಷಿಗಳಲ್ಲಿ ವಸಿಷ್ಠರೇ ಮುಖ್ಯರು. ಈ ಕಾರಣಕ್ಕಾಗಿಯೇ ಇವರಿಗೆ ಮೈತ್ರಾವರುಣೀ ಎಂಬ ಹೆಸರು ಬಂದಿರುವಂತಾಗಿದೆ. ಇವರು ಸೂಕ್ತಗಳಲ್ಲಿ ಮಿತ್ರನನ್ನೂ ವರುಣನನ್ನೂ ಕೂಡಿಸಿಯೇ ಸ್ತುತಿಸಿರುವುದು ಸರ್ವಸಾಮಾನ್ಯ. ವರುಣನನ್ನು ಪ್ರತ್ಯಕ್ಷ ಮಾಡಿಕೊಂಡ ಧೀರರಿವರು. ಅವನನ್ನು ಸರ್ವದಾ ಕಾಣುವ ಬಯಕೆಯನ್ನು ವ್ಯಕ್ತಪಡಿಸಿರುವ ಸೂಕ್ತಗಳು ಹೃದಯ ಕರಗಿಸುವಂತಿವೆ: ‘‘ಸಶರೀರನಾದ ವರುಣನ ಎದುರಿಗೆ ನಿಂತು ಎಂದಿಗೆ ಸಂಭಾಷಣೆಯನ್ನು ಮಾಡಬಲ್ಲೆನು? ಎಂದಿಗೆ ಅವನ ಹೃದಯವನ್ನು ಹೊಕ್ಕಬಲ್ಲೆನು? ಎಂದಿಗೆ ಕೃಪಾ ಸಮುದ್ರನಾದ ವರುಣನು, ನನ್ನ ಸ್ತೋತ್ರವನ್ನು ಕೇಳಿ ಆನಂದಿಸುವನು? ಎಲೈ ವರುಣದೇವನೇ, ನಿನ್ನ ಸಾಕ್ಷಾತ್ ದರ್ಶನವನ್ನು ನಾನು ಪಡೆಯದಂತೆ ಮಾಡಿರುವ ಪಾಪವಾದರೂ ಯಾವುದು? ನೀನೇ ಹೇಳಬೇಕು. ಈ ವಿಷಯವನ್ನು ತಿಳಿಯುವ ಆಸೆಯಿಂದ ಪ್ರಾಜ್ಞರಾದ ಋಷಿಗಳನ್ನು ಕೇಳಿದಾಗ ಅವರು ನನ್ನ ವಿಷಯದಲ್ಲಿ ವರುಣದೇವನು ಕ್ರುದ್ಧನಾಗಿರುವುದಾಗಿ ತಿಳಿಸಿದರು; ಹೇ ವರುಣದೇವ! ನನ್ನ ಯಾವ ಮಹಾ ಪಾಪದ ನಿಮಿತ್ತ ನನ್ನನ್ನು ಕೊಲ್ಲಲು ಇಚ್ಛಿಸುವೆ? ನನ್ನ ಪಾಪದ ಸ್ವರೂಪವನ್ನಾದರೂ ನನಗೆ ತಿಳಿಸು; ಮತ್ತು ವಂಶದಲ್ಲಿ ಹಿಂದಿನಿಂದ ಬಂದ ಪಾಪಗಳಿಂದಲೂ, ನನ್ನ ಶರೀರದಲ್ಲಿ ನಾನಾಗಿ ಮಾಡಿದ ಪಾಪಗಳಿಂದಲೂ ನನ್ನನ್ನು ಬಿಡಿಸು. ಕಳ್ಳನು ತನ್ನ ಚೌರ್ಯಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡು ಪಶುಗಳಿಗೆ ಹುಲ್ಲನ್ನು ಕೊಟ್ಟು ತೃಪ್ತಿಪಡಿಸುವಂತೆಯೂ, ಆಕಳ ಹತ್ತಿರ ಹೋಗಿ ಸೇರಲು ಆತುರವುಳ್ಳ ಕರುವಿನಂತೆಯೂ ಇರುವ ನನ್ನನ್ನು ನಿನ್ನ ಪಾಶದಿಂದ ಬಿಡಿಸು. ನಾನು ಬುದ್ಧಿಪೂರ್ವಕವಾಗಿ ಪಾಪ ಮಾಡಿದವನಲ್ಲ. ನಮ್ಮ ಬುದ್ಧಿಯನ್ನು ಮಂದ ಮಾಡುವ ಮದ್ಯ, ಕ್ರೋಧ, ಅನರ್ಥಸಾಧನವಾದ ದ್ಯೂತ, ಅಜ್ಞಾನ, ಮತ್ತು ಅವಿವೇಕ - ಇವು ಮಾನವರಾದ ನಮ್ಮ ಪಾಪಗಳಿಗೆ ಪ್ರೇರಕಗಳು. ನಾವಾದರೋ ಅಶಕ್ತರು, ನೀನೋ ಬಲವಂತನು. ಸ್ವಪ್ನವೂ ಸಹ ಪಾಪಕ್ಕೆ ಪ್ರೇರಿಸುತ್ತದೆ. ಅಲ್ಲಿ ಸ್ವತಂತ್ರನಲ್ಲದ ನನ್ನನ್ನು ನೀನೇ ಬಿಡಿಸಬೇಕು. ನಮಗೆ ಜ್ಞಾನವನ್ನು ಅನುಗ್ರಹಿಸಿ, ಪ್ರಜ್ಞೆಯನ್ನು ಮೂಡಿಸಿ ಮುಕ್ತನಾಗಿಸುವ ಹೊಣೆ, ಜಗತ್ತಿಗೆ ಧಾರಕನೂ ಪತಿಯೂ ಸಕಲ ದೇವಾತ್ಮಕನೂ ಆದ ನಿನ್ನದೇ ಆಗಿದೆ. ನನ್ನ ಈ ಸೂಕ್ತವು ನಿನ್ನ ಹೃದಯವನ್ನು ಕರಗಿಸಲಿ. ನಮಗೆ ಉಪದ್ರವಕಾರಿಗಳಾದ ಶಕ್ತಿಗಳ ನಾಶವಾಗಲಿ. ನಮ್ಮ-ಸಂಬಂಧವು ಸುಖಕರವೂ ಮಂಗಳಕರವೂ ಆಗಲಿ.’’ (ಋಕ್ ಸಂಹಿತೆ ಮಂಡಲ 7.86).

ವರುಣನಿಗೆ ಶೀಘ್ರಗಾಮಿಗಳಾದ, ಶ್ರೇಷ್ಠ ರೂಪವುಳ್ಳ ಸಕಲ ಲೋಕಸಂಚಾರ ಶಕ್ತಿಯುಳ್ಳ ಅನೇಕ ಚಾರರು ಉಂಟೆಂದೂ, ಅವರು ಸರ್ವದಾ ಲೋಕಗಳನ್ನು ನಿರೀಕ್ಷಿಸುತ್ತಿರುವರೆಂದೂ ವರ್ಣಿಸಲಾಗಿದೆ. ವರುಣನೇ ಸರ್ವಜ್ಞಾನ ಪ್ರವರ್ತಕನೆಂದೂ ವಾಕ್​ತತ್ತ್ವವನ್ನೂ ಅದರ 21 ಪ್ರಭೇದಗಳನ್ನೂ, ಎದೆ, ಕಂಠ, ಶಿರಸ್ಸು ಹೀಗೆ ಮೂರು ಸ್ಥಾನಗಳಲ್ಲೂ ವ್ಯಾಪಿಸಿರುವ ಶಬ್ದತತ್ತ್ವವನ್ನೇ ಮೇಧಾವಿ ವರುಣನು, ಯೋಗಯುಕ್ತರೂ, ಶಿಷ್ಯವೃತ್ತಿಯನ್ನು ಮಾಡಿದವರೂ ಆದ, ವಸಿಷ್ಠರಿಗೆ ಸ್ವಯಂ ಉಪದೇಶಿಸಿದುದಾಗಿಯೂ, ಪರಮಪದದ, ರಹಸ್ಯಗಳನ್ನೂ ಕೂಡ ತಿಳಿಸಿದುದಾಗಿಯೂ ವಸಿಷ್ಠರು ಹೇಳಿಕೊಂಡಿದ್ದಾರೆ. (ಮಂಡಲ 7, ಸೂ 87, ಮಂತ್ರ 4).

ಶರೀರವೇ ಮರದಿಂದ ಮಾಡಿದ ನೌಕೆಯಂತೆ. ಅದರಲ್ಲಿ ವರುಣನೂ, ವಸಿಷ್ಠರೂ ಒಟ್ಟಿಗೆ ಹತ್ತಿ ಗಹನ ಸಮುದ್ರದಂತಿರುವ ಋತದ ಮಧ್ಯದಲ್ಲಿ ಸಂಚರಿಸಿ ಕ್ರೀಡಿಸುವಂತೆ ಅನೇಕ ಕಡೆಗಳಲ್ಲಿ ವರ್ಣಿಸಲಾಗಿದೆ. ‘‘ಮಣ್ಣಿನ ಮನೆಯಿಂದ ತಮ್ಮನ್ನು ವರುಣನು ಚಿನ್ನದ ಮನೆಗೆ ಕರೆದುಕೊಂಡು ಹೋಗುವಂತೆ’’ ಮಾಡಿದ ವಸಿಷ್ಠರ ಪ್ರಾರ್ಥನೆಯಲ್ಲಿ ಸಾಂಕೇತಿಕ ಅರ್ಥ ಸ್ಪಷ್ಟವಾಗಿದೆ. (7-89-1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net