ಸರ್ಕಾರಿ ಕಾರ್ನರ್​: ಹಿಂದಿನ ಸೇವಾವಧಿ ಅನುಕೂಲತೆ ಹೇಗೆ?

sarkari-corner4
Published on

ಪ್ರಶ್ನೆ: ನಾನು, 1993ರ ಮೇ20ರಂದು ಪೊಲೀಸ್​ ಕಾನ್​ಸ್ಟೇಬಲ್​ ಕೆಲಸಕ್ಕೆ ಸೇರಿದೆ. 1995ರ ಡಿಸೆಂಬರ್​ನಲ್ಲಿ ಅಬಕಾರಿ ಪೇದೆ ಹುದ್ದೆಗೆ ಆಯ್ಕೆಗೊಂಡು, 1995ರ ಜ.12ರಂದು ಪೊಲೀಸ್​ ಕಾನ್​ಸ್ಟೇಬಲ್​ ಹುದ್ದೆಗೆ ರಾಜಿನಾಮೆ ನೀಡಿದೆ. 1995ರ ಜ.13ರಂದು ಅಬಕಾರಿ ಪೇದೆ ಹುದ್ದೆಗೆ ಸೇರಿದೆ. ನನ್ನ ಜನ್ಮದಿನಾಂಕ 1963ರ ಜು.22 ಆಗಿದ್ದು, ಅಬಕಾರಿ ಇಲಾಖೆಯಿಂದ ನಿವೃತ್ತಿ ಆಗುವಾಗ ಸೇವಾವಧಿ 28 ವರ್ಷವಾಗುತ್ತದೆ. ಹಾಗಾಗಿ ಪೊಲೀಸ್​ ಇಲಾಖೆ ಸೇವಾವಧಿಯು ನಿವೃತ್ತಿಗೆ ಪರಿಗಣನೆ ಆಗುತ್ತದೆಯೇ? ನನ್ನ ಮೂಲ ವೇತನದಲ್ಲಿ ಬದಲಾವಣೆಗೆ ಅನುಕೂಲವಾಗುತ್ತದೆಯೇ?

| ಗೋವರ್ಧನ ಕುಲಕರ್ಣಿ, ರಾಯಚೂರು

ಉತ್ತರ: ನೀವು 1977ರ ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಯ ನಿಯಮ 11ರ ಮೇರೆಗೆ ಪೊಲೀಸ್​ ಇಲಾಖೆಯಿಂದ ಅನುಮತಿ ಪಡೆದು ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿರಬೇಕು. ಅಬಕಾರಿ ಇಲಾಖೆಗೆ ಆಯ್ಕೆಯಾದಾಗ ನೀವು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 252(ಬಿ)ರಂತೆ ನಿಮ್ಮ ಸೇವಾವಧಿ ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸುವುದಲ್ಲದೆ, ನಿಯಮ 41| ಎ ಪ್ರಕಾರ ವೇತನ ರಕ್ಷಣೆ ಲಭ್ಯವಾಗುತ್ತಿತ್ತು. ನೀವೀಗ ಪೊಲೀಸ್​ ಇಲಾಖೆಯಿಂದ ಸೇವಾ ಪ್ರಮಾಣಪತ್ರ ಪಡೆದು ಪ್ರಸ್ತುತ ಅಬಕಾರಿ ಇಲಾಖೆ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಆಗ ಪ್ರಸ್ತುತ ನೇಮಕಾತಿ ಪ್ರಾಧಿಕಾರವು ಆಡಳಿತಾತ್ಮಕ ವಿವೇಚನಾಧಿಕಾರ ಪ್ರಯೋಗಿಸಿ, ನಿಮ್ಮ ಹಿಂದಿನ ಸೇವಾವಧಿ ಪರಿಗಣಿಸಬಹುದು. ಹೆಚ್ಚಿನ ವಿವರಗಳಿಗೆ "ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ' ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net