

ಸೊಲ್ಲಾಪುರ: ಪತ್ನಿಯೊಬ್ಬಳು ಪತಿ ಮುಂದೆಯೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದ ಸಂಗೋಳ ತಾಲೂಕಿನ ಅಜನಾಲೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪ್ರಿಯಾಂಕಾ(29) ಎಂದು ಗುರುತಿಸಿಲಾಗಿದ್ದು, ಭಾನುವಾರ ಮಧ್ಯಾಹ್ನ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತಿ ಪ್ರವೀಣ್ ಮತ್ತು ಪತ್ನಿ ಪ್ರಿಯಾಂಕಾ ದಾಳಿಂಬೆ ಟ್ರ್ಯಾಕ್ಟರ್‌ಗೆ ಜೋಡಿಸಲಾದ ಬ್ಲೋವರ್ ಘಟಕದ ಸಹಾಯದಿಂದ ದಾಳಿಂಬೆ ಮರಕ್ಕೆ ಸ್ಲರಿಯನ್ನು ಬಿಡುತ್ತಿದ್ದರು. ಈ ವೇಳೆ ಪತಿ ಟ್ರ್ಯಾಕ್ಟರ್ನ್ನು ಚಲಾಯಿಸುತ್ತಿದ್ದು, ಆತ ಮುಂದಕ್ಕೆ ನೋಡುತ್ತಿದ್ದ.
ಇತ್ತಿ ಪತ್ನಿ ಪ್ರಿಯಾಂಕಾ ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ ಬ್ಲೋವರ್ ಯೂನಿಟ್ ಸಹಾಯದಿಂದ ಮರಗಳ ಮೇಲೆ ಸ್ಲರಿ ಸುರಿಯುತ್ತಿದ್ದಳು. ಈ ಮಧ್ಯೆ ಬ್ಲೋವರ್ನಲ್ಲಿ ಸೀರೆಯ ಸಿಲುಕಿಕೊಂಡು ಬ್ಲೋವರ್ ಜಾಮ್ ಆಗಿದೆ. ಪತಿ ಕೂಡಲೇ ಹಿಂತಿರುಗಿ ನೋಡಿದ್ದು, ಸೀರೆಯು ತನ್ನ ಪತ್ನಿಯ ಕತ್ತಿಗೆ ಬಿಗಿದಿರುವುದನ್ನು ಕಂಡು ಕೂಡಲೇ ಟ್ರಾಕ್ಟರ್ ನಿಲ್ಲಿಸಿ ಸಹಾಯಕ್ಕೆ ಧಾವಿಸಿದ್ದಾನೆ.
ಪತ್ನಿಯ ಕೊರಳಲ್ಲಿ ನೇತಾಡುತ್ತಿದ್ದ ಸೀರೆಯನ್ನು ತೆಗೆದ ಪತಿ, ಕೂಡಲೇ ಆಕೆಯನ್ನು ಸಂಗೋಳ ಗ್ರಾಮಾಂತರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾನೆ. ಆದರೆ ದುರದೃಷ್ಟವಶಾತ್, ಆಕೆ ಚಿಕಿತ್ಸೆಗೆ ಮುನ್ನವೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್)