ಬೃಹತ್ ಉದ್ಯಮದ ರೂಪ ತಳೆದಿದೆ ಸೀರೆ ತಯಾರಿಕೆ

ವಿಜಯವಾಣಿ (8)
Published on

ಸೀರೆಯೆಂದರೆ ಸಾಕು ಮಹಿಳೆಯರಿಗೆ ಖುಷಿಯೋ ಖುಷಿ! ಮಹಿಳಾಮಣಿಗಳ ನಡುವಿನ ಚರ್ಚೆ ರಂಗೇರುವುದು ಕೂಡ ಈ ಸೀರೆ ವಿಷಯ ಪ್ರಸ್ತಾಪವಾದ ಮೇಲೆ. ಮದುವೆ, ಉಪನಯನ, ಗೃಹಪ್ರವೇಶ ಯಾವುದೇ ಸಮಾರಂಭವಿರಲಿ ಅಲ್ಲೆಲ್ಲ ಬಗೆಬಗೆ ಸೀರೆಗಳದ್ದೇ ದರ್ಬಾರ್! ಇಂಥ ಸೀರೆಗಳ ತಯಾರಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇರುವುದು ಮಾತ್ರವಲ್ಲ, ತನ್ನದೇ ಹಲವು ಬ್ರ್ಯಾಂಡ್​ಗಳನ್ನು ಸೃಷ್ಟಿಸಿದೆ. ಕಸೂತಿ, ಕೈಮಗ್ಗದ ಸೀರೆಗಳಿಗಂತೂ ಭಾರಿ ಬೇಡಿಕೆ. ಹೀಗಾಗಿ, ಸೀರೆ ತಯಾರಿಕೆ ಬೃಹತ್ ಉದ್ಯಮದ ರೂಪ ತಳೆದು, ಆರ್ಥಿಕತೆಯ ಶಕ್ತಿಗಳಲ್ಲಿ ಒಂದಾಗಿದೆ. ಮಾತ್ರವಲ್ಲ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಮಾಧ್ಯಮವೂ ಆಗಿದೆ. ಕೈಮಗ್ಗದ ನೇಕಾರಿಕೆ ಜಗತ್ತಿನ ಭೂಪಟದಲ್ಲಿ ಕರ್ನಾಟಕಕ್ಕೊಂದು ಗೌರವದ ಸ್ಥಾನ ತಂದುಕೊಟ್ಟಿದೆ.

ಮೊಳಕಾಲ್ಮೂರು ಸೀರೆ

ಚಿತ್ರದುರ್ಗದ ಮೊಳಕಾಲ್ಮೂರು ಕೈಮಗ್ಗ ಕ್ಷೇತ್ರದಲ್ಲಿ ವಿಶ್ವವಿಖ್ಯಾತವಾಗಿದೆ. ಇಲ್ಲಿ ತಯಾರಿಸುವ ಸಾಂಪ್ರದಾಯಿಕ ರೇಷ್ಮೆ ಸೀರೆಗಳ ಮೇಲೆ ದೇವಸ್ಥಾನ, ಹಂಸ, ರುದ್ರಾಕ್ಷಿ, ತಾವರೆ, ನವಿಲು, ಮಾವಿನಕಾಯಿ, ಗಂಡಭೇರುಂಡ ಮುಂತಾದ ವಿನ್ಯಾಸಗಳ ಕುಸುರಿ ಕಲೆ ಗಮನ ಸೆಳೆಯುವಂಥದ್ದು. ಸೋಕುಲ ಸಾಲಿ, ಪಟ್ಟು ಸಾಲಿ ಮತ್ತು ಪದ್ಮ ಸಾಲಿ ಸಂಪ್ರದಾಯದ ಸಾಂಪ್ರದಾಯಿಕ ನೇಕಾರರಿಂದ ನೇಯ್ಗೆ ನಡೆಯುತ್ತದೆ. ತನ್ನ ವಿಶಿಷ್ಟ ವಿನ್ಯಾಸಗಳಿಂದಾಗಿ ಇಲ್ಲಿನ ರೇಷ್ಮೆ ಸೀರೆಗಳು ಕರ್ನಾಟಕ ಮಾತ್ರವಲ್ಲದೆ ಭಾರತದೆಲ್ಲಡೆ ಜನಪ್ರಿಯವಾಗಿವೆ. ಈ ಭಾಗದಲ್ಲಿ 440ಕ್ಕೂ ಅಧಿಕ ಕೈಮಗ್ಗ ರೇಷ್ಮೆ ಸೀರೆಯ ತಯಾರಕರಿದ್ದು, ಈ ಪ್ರದೇಶದ ಮುಖ್ಯ ಉದ್ಯಮವಾಗಿ ಬೆಳೆದಿದೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ ಕಾಲದಲ್ಲಿ ವಿಶೇಷ ಪ್ರೋತ್ಸಾಹ ಪಡೆದು, ಬೆಳೆದು ಬಂದಿದೆ. ಜಿಯೋಗ್ರಾಫಿಕ್ ಇಂಡೆಕ್ಸ್ ಹೊಂದಿರುವ ಮೊಳಕಾಲ್ಮೂರು ಸೀರೆ ಅಮೆರಿಕ ಮತ್ತು ಆಸ್ಟ್ರೇಲಿಯಾಕ್ಕೆ ರಫ್ತಾಗುತ್ತಿದೆ.

ಇಳಕಲ್ ಸೀರೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ 8ನೇ ಶತಮಾನದಿಂದಲೇ ನೇಯ್ಗೆಗೆ ಪ್ರಸಿದ್ಧವಾಗಿದೆ. ಇಲ್ಲಿ ತಯಾರಾಗುವ ಸೀರೆಗಳು ಸಾಂಪ್ರದಾಯಿಕ ಸೊಬಗಿನಿಂದ ಗಮನ ಸೆಳೆಯುತ್ತವೆ. ರೇಷ್ಮೆ, ಹತ್ತಿಯಿಂದ ತಯಾರಿಸಲಾಗುವ ಸೀರೆಗಳು ವಿಶಿಷ್ಟ ಅಂಚಿನಿಂದ ಗ್ರಾಹಕರ ಮನಗೆದ್ದಿವೆ. ಗೋಮಿ (ಇಳಕಲ್ ದಡಿ), ಪರಸ್ ಪೆಟ್ ಅಂಚು ಪ್ರಸಿದ್ಧಿ ಹೊಂದಿವೆ. ಸೀರೆಯ ಅಂಚಿಗೆ ಹಾಗೂ ಸೆರಗಿಗೆ ಕಚ್ಚಾ ರೇಷ್ಮೆಯ ನೂಲನ್ನು ಬಳಸುವುದು ವಿಶೇಷ. ‘ಟೋಪಿ ತೆನೆ’ಯೆಂಬ ತಂತ್ರದಿಂದ ಇಳಕಲ್ ಸೀರೆಗಳು ತಯಾರಾಗುತ್ತವೆ. 20 ಸಾವಿರಕ್ಕೂ ಅಧಿಕ ನೇಕಾರರು ಇಳಕಲ್ ಸೀರೆ ನೇಯ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಐ ಟ್ಯಾಗ್ ಪಡೆದಿರುವ ಇಳಕಲ್ ಸೀರೆಯನ್ನು ಫ್ಯಾಶನ್ ಶೋನಲ್ಲೂ ಹೆಚ್ಚಾಗಿ ಬಳಸಲಾಗುತ್ತಿದೆ.

ಗುಳೇದಗುಡ್ಡ ಖಣ

ರವಿಕೆಯ ಖಣದ (ಕುಪ್ಪಸ) ತಯಾರಿಕೆಯಲ್ಲಿ ಬಾದಾಮಿಯ ಗುಳೇದಗುಡ್ಡ ಪ್ರಸಿದ್ಧವಾಗಿದೆ. ನೈಸರ್ಗಿಕವಾಗಿ ಬಣ್ಣ ಕೊಟ್ಟ ರೇಷ್ಮೆಯಲ್ಲಿ ಜರಿಯ ಸೂರ್ಯನಾರಾಯಣ, ಸಿದ್ಧೇಶ್ವರ ಮುಕುಟ, ತೇರು, ಆನೆಹೆಜ್ಜೆ, ತುಳಸೀಕಟ್ಟೆ, ಸೂಜಿಮಲ್ಲಿಗೆ, ಕವಳೆಹೂ ಮುಂತಾದ ವಿನ್ಯಾಸಗಳ ನೇಯ್ಗೆಯ ರವಿಕೆ ತಮ್ಮ ವಿನ್ಯಾಸದಿಂದಲೇ ಗಮನ ಸೆಳೆಯುತ್ತವೆ. ಯುವತಿಯರು, ಮಹಿಳೆಯರು ಇಳಕಲ್ ಸೀರೆಗೆ ಗುಳೇದಗುಡ್ಡದ ಖಣವನ್ನೇ ಖರೀದಿಸುತ್ತಾರೆ. ಕೆಂಪು, ಹಳದಿ, ಮತ್ತು ನೀಲಿ ನೈಸರ್ಗಿಕ ಬಣ್ಣಗಳಲ್ಲಿ ಈ ಖಣಗಳನ್ನು ತಯಾರಿಸಲಾಗುತ್ತದೆ. ಗುಳೇದಗುಡ್ಡ ಖಣಕ್ಕೆ ಕೇಂದ್ರ ಸರ್ಕಾರ ಜಿಐ ಟ್ಯಾಗ್ ನೀಡಿರುವುದರಿಂದ ಉದ್ಯಮಕ್ಕೆ ಉತ್ತೇಜನ ಸಿಕ್ಕಿದೆ.

ಮೈಸೂರು ರೇಷ್ಮೆ ಸೀರೆ

ಭಾರತದಲ್ಲಿರುವ ಅತ್ಯಂತ ಜನಪ್ರಿಯ ರೇಷ್ಮೆ ಸೀರೆಗಳ ವಿಧಗಳಲ್ಲಿ ಪ್ರಮುಖವಾದುದು ಮೈಸೂರು ರೇಷ್ಮೆ ಸೀರೆ. ಮೃದುವಾದ ವಿನ್ಯಾಸ, ರೋಮಾಂಚಕ ಬಣ್ಣಗಳು ಹಾಗೂ ವೈವಿಧ್ಯದಿಂದ ಇವು ಹೆಸರುವಾಸಿಯಾಗಿವೆ. ಆಫ್​ಲೈನ್ ಮಾತ್ರವಲ್ಲದೆ ಆನ್​ಲೈನ್​ನಲ್ಲೂ ದೊಡ್ಡ ಮಾರುಕಟ್ಟೆಯನ್ನು ಮೈಸೂರು ರೇಷ್ಮೆ ಸೀರೆಗಳು ಹೊಂದಿವೆ. ಮದುವೆ ಸಮಾರಂಭಗಳಿಗೆ ಮತ್ತು ವಧುವಿಗಾಗಿ ತಯಾರಿಸಲಾಗುವ ವಿಶೇಷ ವಿನ್ಯಾಸದ ಈ ಸೀರೆಗಳಿಗೆ ದೇಶಾದ್ಯಂತ ಬೇಡಿಕೆ ಇದೆ. ಮೈಸೂರು ರೇಷ್ಮೆ ಸೀರೆ ದೀರ್ಘಕಾಲ ಬಾಳಿಕೆ ಬರುತ್ತದೆ. ಕರ್ನಾಟಕ ರೇಷ್ಮೆ ಉದ್ಯಮ ನಿಗಮ (ಕೆಎಸ್​ಐಸಿ) ಆನ್​ಲೈನ್ ಪೋರ್ಟಲ್ ಮೂಲಕ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಿಂದ ಮೈಸೂರು ರೇಷ್ಮೆ ಸೀರೆಗೆ ಆರ್ಡರ್​ಗಳು ಸಿಗುತ್ತಿವೆ. ಮೈಸೂರಿನಲ್ಲಿ 152ಕ್ಕೂ ಹೆಚ್ಚು ಕೈಮಗ್ಗಗಳು ಕಾರ್ಯನಿರ್ವಹಿಸುತ್ತಿವೆ. ಸೀರೆಯಲ್ಲಿ ಕಸೂತಿ ಕೋಡ್ ಮತ್ತು ಹೊಲೊಗ್ರಾಮ್ ಹೊಂದಿರುವುದು ವಿಶೇಷ. ಜಿಐ ಟ್ಯಾಗ್ ಹೊಂದಿದೆ.

ಎಷ್ಟೊಂದು ವಿಧಗಳು

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಹೆಗ್ಗೋಡು ಖಾದಿ ಮತ್ತು ಹತ್ತಿ ಉತ್ಪನ್ನಗಳಿಗೆ ಹೆಸರುವಾಸಿಯಾಗಿವೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಹತ್ತಿ ಸೀರೆಗಳಿಗೆ ಪ್ರಸಿದ್ಧಿ ಹೊಂದಿದೆ. ಉಡುಪಿಯ ಸಾಲಿಕೇರಿ ಸರಳವಾದ ಹತ್ತಿಯ ವಸ್ತ್ರಗಳಿಂದ ಗ್ರಾಹಕರ ಮನಗೆದ್ದಿವೆ. ಅದೇ ರೀತಿ ಬೆಳಗಾವಿಯ ಖಾಸ್​ಬಾಗ್ ಮತ್ತು ವಡಗಾವ್​ನಲ್ಲಿ ತಯಾರಾಗುವ ಶಹಾಪುರ ಸೀರೆಗಳು ಹಲವು ದೇಶಗಳಿಗೆ ರಫ್ತಾಗುತ್ತಿವೆ. ಗದಗ ಬೆಟಗೇರಿಯ ಪರಾಸ್ ಮತ್ತು ಧೋಡಾಪರಾಸ್ ರೇಷ್ಮೆ ಸೀರೆಗಳು ಕೂಡ ಉತ್ತಮ ಮಾರುಕಟ್ಟೆ ಹೊಂದಿವೆ. ಮೈಸೂರು ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಸೀರೆ ತನ್ನ ಗುಣಮಟ್ಟದಿಂದ ಗ್ರಾಹಕರ ಮನಗೆದ್ದಿದೆ. ಕೊಳ್ಳೇಗಾಲದ ರೇಷ್ಮೆ ಸೀರೆಗಳು, ತುಮಕೂರು ಜಿಲ್ಲೆಯ ಕಲ್ಲೂರಿನ ರೇಷ್ಮೆ ಕೈಮಗ್ಗ ಸೀರೆಗಳು ಪ್ರಸಿದ್ಧವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net